Today's Quote...

"Brightness is sun's nature, coolness is
water's nature, heat fire's nature. Similarly the
nature of Atma is Sath (Absolute Existence),
Chith (Absolute Knowledge) Ananda
(Absolute Bliss), Permanence and Purity." - Atmabodha, Aadi Sankaracharya.

Sunday, October 16, 2011

ಭದ್ರೆಯ ಹೊಳೆಯಲಿ....


ಈ ಅಂಕಣದಲ್ಲಿ ನಾನು ಬರೆದ ಚಿತ್ರವಲ್ಲ... ನನ್ನ ಪ್ರವಾಸ ಅನುಭವದ ಚಿತ್ರಣವಿದೆ.

ಕೊಡಗು, ಅಬ್ಬೆ ಜಲಪಾತ, ಮಡಿಕೇರಿ ಹೀಗೆ ಎಲ್ಲಾ ಜಾಗಗಳ ಪಟ್ಟಿಯಲ್ಲಿ ಕೊನೆಗೆ ನಮ್ಮ ಪ್ರಯಾಣ ನಿರ್ಧಾರವಾಗಿದ್ದು ’ಭದ್ರೆ’ಯ ಕಡೆಗೆ...

ಹೊರಡುವಾಗ ಸುಮಾರು ಒಂದು ಗಂಟೆ ತಡವಾದ ನಮ್ಮ ಪ್ರಯಾಣ, ಕೆಲವೊಂದು ನಿರ್ಧಾರಗಳಿಂದ ಪ್ರಾರಂಭವಾಯಿತು. ಮುಂದೆ ನಮ್ಮ ಪ್ರವಾಸದ ಪ್ರಾರಂಭ, ಹೊತ್ತು ಮಾಡಿದವರ ಮನೆಯಿಂದ ಎಂದು! ಸೂರ್ಯ ಎದ್ದೇಳುವ ಮುನ್ನ ಹೊರಡಲಾಗದಿದ್ದರೂ...ಸೂರ್ಯನಿಗೆ ಬೆಂಗಳೂರಿನಲ್ಲೇ ’ಹಾಯ್’ ಹೇಳಿತು ನಮ್ಮ ೧೨ ಜನರ ಗುಂಪು. ಇದರಲ್ಲಿ ಇಬ್ಬರು ಚಿಕ್ಕ ಹುಡುಗರು...

ಹಾಸನದ ಹೆದ್ದಾರಿಯಲ್ಲಿರುವ ಮಯೂರ ಹೋಟೆಲ್ ಬರುವಷ್ಟರಲ್ಲಿ ’ಹುಡುಗರು’ ಚಿತ್ರದಿಂದ ನಾವು ಜಗಳೂರು ತಲುಪಿದ್ದೆವು! ಸಾಗು ಬರುವಷ್ಟರಲ್ಲಿ ಪೂರಿಯನ್ನು ಮುಗಿಸಿ, ಕರಿಯಾದ ಮಸಾಲ ದೋಸೆಯನ್ನೂ, ಸಿಹಿ ಇಲ್ಲದ ಕೇಸರಿ ಬಾತನ್ನೇ ಪರಮಾನ್ನವೆಂದುಕೊಂಡೆವು.

’ಹುಡುಗರು’ ಚಿತ್ರ ಬೇಡವೆಂದೆನೆಸಿ, ಕೆಲವೊಬ್ಬರ ಕೋರಿಕೆಯ ಮೇರೆಗೆ ’ಸಂಜು ಮತ್ತು ಗೀತ’ ಪ್ರಾರಂಭಿಸಿದರು. ಬರೀ ಚಲನಚಿತ್ರ ನೋಡುತ್ತಿದ್ದೆವು ಎಂದುಕೊಳ್ಳಬೇಡಿ, ಕಚೇರಿಯ ಹಾಸ್ಯಗಳು, ಹೊಸ ನಾಮಕರಣಗಳು ಇವೆಲ್ಲಾ ನಮ್ಮ ಗುಂಪುನಲ್ಲಿ ಮಾಮೂಲು...ಆದರೆ ಸ್ವಲ್ಪ ತಪ್ಪಾಗಿದ್ದೆ ಈ ಚಿತ್ರದ ಆಯ್ಕೆ.

ನಮ್ಮ ಪ್ರಯಾಣ ಎಲ್ಲಿಗೆ ಎಂತಲೇ ನಾನು ಸರಿಯಾಗಿ ಹೇಳಲಿಲ್ಲ ಅಲ್ವಾ!!!... , ನಾವು ಭದ್ರ ನದಿಯ ಬಳಿಯಿರುವ ಕ್ಯಾಂಪ್ ಗೆ ಮುಂಗಡವಾಗಿ ಕಾದಿರಿಸಿದ್ದೆವು. ಬೆಂಗಳೂರಿನಿಂದ ೨೮೫ ಕಿ.ಮೀ... ಚಿಕ್ಕಮಗಳೂರು, ಶೃಂಗೇರಿ ಕಡೆಗೆ... ಮಧ್ಯಾಹ್ನವಾಗುತ್ತಿದ್ದರಿಂದ ಊಟದ ವ್ಯವಸ್ಥೆಯನ್ನು ಫೋನ್ ನಲ್ಲಿ ವಿಚಾರಿಸಿ ಅಂತೂ ನಮ್ಮ ಗುರಿಯನ್ನು ತಲುಪಿದೆವು. ಮಧ್ಯದಲ್ಲಿ ಮುಂದಿನ ಪ್ರವಾಸದ ಬಗ್ಗೆ ನಮ್ಮ ಹರಟೆ ಸಾಗಿತ್ತು. ತಲುಪುತ್ತಿದ್ದಂತೆ ನಮಗೆ ಒಳ್ಳೆಯ ಉಪಚಾರ ಕ್ಯಾಂಪ್ ನವರಿಂದ. ಮೂರು ಟೆಂಟ್ ಗಳನ್ನು ಆಕ್ರಮಿಸಿ, ಊಟದ ನಂತರ ನೀರಿಗೆ ಇಳಿಯಲು ಸಿದ್ದವಾದೆವು.

ಅದೊಂದು ಸುಂದರ ತಾಣ, ದೂರದಲ್ಲಿ ಸುತ್ತಲೂ ಬೆಟ್ಟಗಳ ದೃಶ್ಯದೊಂದಿಗೆ ಕೆಳಗೆ ಭದ್ರ ನದಿಯ ಓಟ ತನ್ನತ್ತ ಸಳೆಯುವಂತಹುದು. ನೀರು ತುಂಬಾ ಹೆಚ್ಚಾಗಿರದಿದ್ದರೂ ನಾವು ಸಮಯ ಕಳೆಯಲು ಸರಿಯಾಗಿತ್ತು. ೩ ಗಂಟೆಯ ಸಮಯವೆನಿಸುತ್ತದೆ, ಎಲ್ಲಾ Life jacket ಧರಿಸಿ ತಣ್ಣಗೆ ಕೊರೆಯುತ್ತಿದ್ದ ನೀರಿಗೆ ನಿಧಾನವಾಗಿ ಇಳಿದೆವು. ನೀರಿನಲ್ಲಿ ಆಡುವುದೆಂದರೆ ಎಂಥವರಿಗಾದರೂ ಇಷ್ಟ... ಎಲ್ಲಾ ಚಿಕ್ಕವರಾಗುತ್ತೇವೆ ಎನ್ನುವುದಕ್ಕೆ ನಾವೇ ಉದಾಹರಣೆಯಾಗಿದ್ದೆವು. ಚಿಕ್ಕಂದಿನಲ್ಲಿ ಕೊನೆಯ ವಾರ್ಷಿಕ ಪರೀಕ್ಷೆಯನ್ನು ಈಗಷ್ಟೆ ಮುಗಿಸಿ, ಸ್ನೇಹಿತರೊಂದಿಗೆ ಆಡಿದಷ್ಟು ಸಂತೋಷವಿತ್ತು.

ನಮ್ಮ ಅದೃಷ್ಟದಂತೆ ನೀರಿನಲ್ಲಿ ಆಡುತ್ತಿದ್ದಾಗ, ಮೋಡಗಳೂ ನಮ್ಮೊಂದಿಗೆ ಆಡಲು ಬರುವಂತೆ ಮಳೆಗರೆಯಿತು. ಆಹಾ..ಇದಕ್ಕಿಂತ ಮತ್ತೇನು ಬೇಕು ಪ್ರಕೃತಿಯನ್ನು ಸವಿಯಲು. ನೀರಿಗೆ ಇಳಿಯಲು ನಡುಗಿದ ನಾವು ಈಗ ಆಚೆ ಬರಲು ನಡುಗಿದೆವು... ಅಲ್ಲಿದ್ದ ಕ್ಯಾಂಪ್ ವ್ಯವಸ್ಥೆಯನ್ನು ಮೆಚ್ಚಬೇಕು, ಅವರು ನಮಗೆಲ್ಲಾ ಬಿಸಿ ನೀರನ್ನು ಒದಗಿಸಿದರು.

ಸ್ನಾನ, ಟೀ ಎಲ್ಲಾ ಮುಗಿಸಿ ಪಕ್ಕದಲ್ಲಿ ಹುಲ್ಲಿನ ಮೈದಾನದಲ್ಲಿ ಕಟ್ಟಿದ್ದ ನೆಟ್ ನಲ್ಲಿ shuttle badminton  ಆಡಿದೆವು. ಪಕ್ಕದಲ್ಲಿದ್ದ ಹೊಲವನ್ನು ನೋಡಿದರೆ, ನನಗೆ ನಮ್ಮ office ಇಲ್ಲಿದ್ದಿದ್ದರೆ ಎಂದೆನಿಸಿತು.
ಅಲ್ಲೇ ನಮ್ಮ ಸ್ನೇಹಿತೆಗೆ ಜಿಗಣೆ ಕಚ್ಚಿ, ರಕ್ತ ಬರುತ್ತಿರುವುದು ಕಾಣಿಸಿದಾಗಲೇ ನನಗೆ ಮೊದಲ ಸಲ ಜಿಗಣೆಯ ಪರಿಚಯವಾಯಿತು. ಮತ್ತೆ ಎಲ್ಲರಿಗೂ ಕಾಲುಗಳನ್ನು ನೋಡಿಕೊಳ್ಳುವುದೇ ಆಯ್ತು. ಸೂರ್ಯಾಸ್ತವಾಗುತ್ತಿದ್ದಂತೆ camp fire ಗಾಗಿ ಸುತ್ತ ಕೂತ ನಾವು ಒಂದು ಸಣ್ಣ ಆಟದೊಂದಿಗೆ ಎಲ್ಲರಿಂದ ಒಂದೊಂದು ಕಾರ್ಯಕ್ರಮವನ್ನು ನಡೆಸಿ, ’ಹುಡುಗರು’ ಚಿತ್ರದ ’ನಾ ಬೋರ್ಡು ಇರದ ಬಸ್ಸನ್ನು...ಪಂಕಜ’ ಹಾಡಿಗೆ ಹೆಜ್ಜೆಹಾಕಿದ್ದಾಯ್ತು. ಆ ಸ್ಥಳ ಎಂಥವರನ್ನು ಭದ್ರೆಯ ಮಡಿಲಲ್ಲಿ ಚಿಕ್ಕ ಮಕ್ಕಳಂತಾಗಿಸುತ್ತದೆ!!! 
ಹೊಟ್ಟೆ ಹಸಿವಿಗಾಗಿ ಬಿಸಿ ಬಿಸಿ ಊಟ ತಯಾರಿತ್ತು...ಆಡಲು ನಮ್ಮ Engineering ಕಾಲೇಜ್ ನ ಮಾತುಗಳು. ತಿಂದು ಮತ್ತೆ camp fire ನ ಬಳಿ ಸ್ವಲ್ಪ ಹೊತ್ತು ಕೂತೆವು, ನನ್ನ ಸ್ನೇಹಿತರಿಗೆ.. ’ಕನಸ ಮಾರುವ ಚೆಲುವ ಹಾಡ ನಿಲ್ಲಿಸ ಬೇಡ’ ಎಂದೆನಿಸಿದರೆ, ನನಗೆ ’ಅಮ್ಮಾ, ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು...’ ಎಂದೆನಿಸಿತು. ಈ ಎರಡು ಹಾಡುಗಳೊಂದಿಗೆ ನಮ್ಮ ಸ್ವಲ್ಪ ಸಮಯ ಹಾಡಿನಲ್ಲಿ ಕಳೆದೆವು. ದಿನನಿತ್ಯದ ಕೆಲಸಗಳ ಪಟ್ಟಿಯನ್ನು ತಲೆಯಿಂದ ಕಿತ್ತೊಗೆದು, ಮೊಬೈಲ್, ಟಿವಿ, ಸಮಯದ ಜೊತೆ ಓಡುವುದರಿಂದ ವಿಶ್ರಾಂತಿ ಸಿಕ್ಕ ನಮ್ಮೆಲ್ಲರ ಮನಸ್ಸು ಪ್ರಶಾಂತವಾಗಿತ್ತು ಆ ಕತ್ತಲಲ್ಲಿ.


ಬೆಳಗಿನಿಂದ ಒಂದೇ ಸಮನೆ ಹರಟೆ, ಪ್ರಯಾಣ, ಚಿಕ್ಕ ಮಕ್ಕಳಂತೆ ನೀರಿನಲ್ಲಿ ಆಡಿ ದಣಿವಾಗಿದ್ದ ನಮ್ಮೆಲ್ಲರಿಗೂ ಟೆಂಟ್ ನಲ್ಲಿ ಮಲಗ್ಗಿದ್ದು ತುಂಬಾ ಒಳ್ಳೆಯ ನಿದ್ದೆ ತಂದಿತು. ಬೆಳಿಗ್ಗೆ, ಕಾಡಿನ ಕಡೆ ಪ್ರಯಾಣ....



ಎದ್ದು ನಾವು ಕಾಡಿಗೆ ’ಸಿದ್ದ’ವಾಗುತ್ತಿದ್ದಂತೆ ಅಲ್ಲಿಯವರು ಟೀ, ಕಾಫಿ ಮಾಡಿಟ್ಟರು. ಅಲ್ಲಿದ್ದ ವ್ಯವಸ್ಥಾಪಕರಲ್ಲಿ ಇಬ್ಬರು ನಮ್ಮನ್ನು ಕಾಡಿನತ್ತ ಕರೆದುಕೊಂಡು ಹೋದರು. ಕಾಲ್ನಡಿಗೆಯಲ್ಲಿ ಸಾಲಾಗಿ ಹೋಗುವುದು, ಅಲ್ಲಿದ್ದ ಜಿಗಣೆಗಳಿಂದ ತಪ್ಪಿಸಿಕೊಳ್ಳುವುದು ಹೊಸ ಅನುಭವ. ನದಿಯ ಒಂದು ದಡದಲ್ಲಿ ಹಿಂದಿನ ದಿನ ಆಡಿದ್ದ ನಾವು, ಈಗ ಮತ್ತೊಂದು ದಡದಲ್ಲಿ ಇದ್ದೆವು. ಆದರೆ ಇದು ಆಟವಾಡಲು ಆಳ ಹೆಚ್ಚಾದ್ದರಿಂದ, ಬಂಡೆಗಳ ಮೇಲೆ ಎಲ್ಲರ photo session  ಪ್ರಾರಂಭವಾಯ್ತು. ಪ್ರತಿಯೊಬ್ಬರಿಗೂ ಈ ಫೋಟೊಗಳು Facebook ಗಾಗಿ!!! ನವ ವಿವಾಹಿತರಾಗಿದ್ದ ಒಂದು ಜೋಡಿಗೆ ಇದು ಅವರ ಹೊಸ albums ಗೆ  ತಮ್ಮ ಜೋಡಿ ಚಿತ್ರಗಳು...ಮದುವೆಯಾಗದವರಿಗೆ ’ಮಗಧೀರ’ನಿಗಾಗಿ ಬಂಡೆಯ ಮೇಲೆ ಕಾದು ಕೂತ ಚಿತ್ರಗಳು, ಕುಟುಂಬದೊಂದಿಗೆ ಬಂದವರಿಗೆ ಇದೊಂದು perfect photo! ಮತ್ತೆ ಕೆಲವರಿಗೆ ಕಾಲ ಕಳೆಯಲು, ಮರೆಯಲಾಗದ ಕ್ಷಣಗಳನು ಮೆಲುಕು ಹಾಕಲು.


ದೂರ ಕಾಡಿನಲ್ಲಿ ಎಲ್ಲೋ ಕಳೆದು ಹೋಗುತ್ತಿದ್ದ ನಮಗೆ ಜಿಗಣೆಗಳದೇ ಯೋಚನೆ. ನೋಡಿಯೂ ನೋಡದಂತೆ ಸಾಗುತ್ತಿದ್ದ ನನಗೆ ಯಾರೋ ನನ್ನ ಪಾದಗಳಲ್ಲಿ ಹತ್ತುತ್ತಿರುವುದನ್ನು ತೋರಿಸಿದಾಗ ಪ್ರಾರಂಭವಾಯ್ತು ಜಿಗಣೆ dance. ಕೊನೆಗೆ ಎಲ್ಲಾ ಸಾಕೆಂದು ವಾಪಸ್ಸಾದಾಗ ಮತ್ತೆ ಒಂದು ಚಿಕ್ಕ beach ನಂತಿದ್ದ ದಡದಲ್ಲಿ ಜಿಗಣೆಗಳಿಗಾಗಿ ನಮ್ಮೆಲ್ಲಾ ಶೂ, ಚಪ್ಪಲಿಗಳನ್ನು ಶೋಧಿಸಿದೆವು. ಮರಳಲ್ಲಿ ನಮ್ಮ ಹೆಸರುಗಳನ್ನು ಕೆತ್ತಿ, ಮರಳುಗಪ್ಪೆಯನ್ನು ನಮ್ಮ ಕ್ಯಾಮೆರಾದಲ್ಲಿ ಹಿಡಿದು, ಮರಳಲ್ಲಿ ಮನೆ ಕಟ್ಟಿ...ಹೊರಟೆವು. ನನಗಂತೂ ತುಂಬಾ ಚಿಕ್ಕ ಚಾರಣ ಪ್ರಯತ್ನವಾದರೂ ಸ್ನೇಹಿತರೊಂದಿಗೆ ಕಳೆದ ಪ್ರತಿಯೊಂದು ಫಳಿಗೆಯೂ ನೆನಪಿನಲ್ಲಿ ಅಚ್ಚ ಹಸಿರಾಗಿರುತ್ತದೆ.



 ನಮಗಾಗಿ ಕಾದಿದ್ದ ಇಡ್ಲಿ, ಸಾಂಬಾರ್, ವಡೆಯಿಂದ ಹೊಟ್ಟೆ ತುಂಬಿಸಿ, ಗನ್ ಹಿಡಿದು ದೂರದಲ್ಲಿದ್ದ ಬಾಟಲ್ ಗೆ ೩ ಪ್ರಯತ್ರದಲ್ಲಿ ಹೊಡೆಯುವ ಅನುಭವವೂ ಸಿಕ್ಕಿತು. ಮತ್ತೆ ಭದ್ರೆಗೆ ಇಳಿದೆವು... ಗಂಟೆ ೧೧ ಆಗಿದ್ದರಿಂದ, ಬಿಸಿಲಲ್ಲೇ ತಣ್ಣೀರಿನಾಟ... ಅಲ್ಲಿದ್ದವರು ನನ್ನಂಥವರನ್ನು ನೀರಿನಲ್ಲಿ ತೇಲಿಸಿದರು... ನೀರಿನಲ್ಲಿ Life jacket ಇದ್ದರೂ ಹೆದರುತ್ತಿದ್ದ ನನಗೆ ಮುಂಗಾರು ಮಳೆಯಲ್ಲಿ ಗಣೇಶ್ ಮಲಗಿದ ಹಾಗೆ ಮಲಗಿ ತೇಲಿದ್ದು ಆಕಾಶದಡಿ ಕಣ್ಣು ಮುಚ್ಚಿ ಕನಸು ಕಂಡಂತಿತ್ತು... ಅದೊಂದು ಮತ್ತೆ ಮತ್ತೆ ಆ ಸ್ಥಳಕ್ಕೆ
ಹೋಗಬೇಕೆನೆಸುವ ಅನುಭವ.
ಮತ್ತೆ ಎಲ್ಲರೂ ಬೆಂಗಳೂರಿಗೆ ಸಿದ್ದವಾದೆವು. ೩೦ ಕಿ.ಮೀ ದೂರದಲ್ಲಿದ್ದ ಶೃಂಗೇರಿ ಶಾರದೆಗೂ, ಹೊರನಾಡಿನ ಅನ್ನಪೂರ್ಣೇಶ್ವರಿಗೂ ದೂರದಿಂದಲೇ ನಮಿಸಿ ಹೊರಟೆವು.. ಅಲ್ಲಿಂದ ಬೆಂಗಳೂರಿಗೆ ಬರಲು ಯಾರಿಗೂ ಇಷ್ಟವಿರಲಿಲ್ಲ....ಆದರೂ ಮುಂದಿನ ಪ್ರಯಾಣಕ್ಕಾದರೂ ದುಡಿಯಬೇಕಲ್ಲ..!

ಇದೇ ಸುಂದರ ಪ್ರಕೃತಿಯ ಮಡಿಲಲ್ಲಿ ನಾವು ಕಳೆದ ಚಿತ್ರಣ... ಇಷ್ಟವಾದರೆ ನೀವೂ ಇದನ್ನ ನೋಡಿ ನಮ್ಮಂತೆಯೇ ನಿಮ್ಮ ದಿನನಿತ್ಯದ ಕೆಲಸದಿಂದ ಹೊರಹೋಗಿ. ಜೀವನ ಒಮ್ಮೆಯಷ್ಟೆ ಸಿಗುವುದು ಇದನ್ನೆಲ್ಲ ಕಂಡು ಆನಂದಿಸಲು....


Thursday, July 14, 2011

ಒಮ್ಮೆ ಆಲೋಚನೆಗೆ ಬಂದಿದ್ದು...



ಪ್ರತಿದಿನ ನಾವು ಈ ಬಂಡವಾಳವಿಲ್ಲದ ಜೀವನದ ವ್ಯಾಪಾರ ಪ್ರಾರಂಭಿಸಿದಾಗ, ಈ ದಿನ ಹೇಗೆ ಕಳೆಯುವುದೋ ಎಂದು ಒಮ್ಮೆಯೂ ಆಲೋಚಿಸಲು ಸಮಯವಿಲ್ಲದಂತಾಗುತ್ತದೆ. ಸಂಜೆ ಸುಂದರವಾಗಿರುತ್ತದೆ. ಸುತ್ತಲಿರುವ ಪ್ರಪಂಚವೆಲ್ಲಾ ನಮ್ಮೊಟ್ಟಿಗೆ ಓಡುವಾಗ ಎಲ್ಲಾ ನಮ್ಮವರಾಗಿಯೇ ಕಾಣುತ್ತಾರೆ. ಒಂಟಿಯಾಗಿ, ಎಂದು ತನ್ನ ಬಗ್ಗೆ ಯೋಚಿಸಲು ಸಮಯ ಸಿಗುತ್ತದೋ ಎಂದೆನಿಸುತ್ತದೆ. ಆದರೆ ಸುತ್ತಲಿನ ಬಂಧುಗಳ,ಸ್ನೇಹಿತರ ಹಾಗೂ ಪ್ರತಿ ಕ್ಷಣ ತಲೆಯಲ್ಲಿ ಗುಂಯ್ ಗುಟ್ಟುವ ನಮ್ಮ ಕರ್ತವ್ಯಗಳ ಆಲೋಚನೆಗಳಿಂದ ಸಮಯ ಓಡುತ್ತದೆ. ಅದೊಂದು ಯಾಂತ್ರಿಕ ಬದುಕೆನ್ನಿಸುತ್ತದೆ.

ಒಮ್ಮೆ ಆಲೋಚಿಸಿ ನೋಡೋಣ... ಸ್ಕೂಲಿನಲ್ಲಿ, ಓದಿ ಮುಂದೆ ಬರುವುದೊಂದೇ ಗುರಿ, ಯಾಕೆಂದರೆ ಆಗ ಅರಿವಾಗಿದ್ದು ಅಷ್ಟೆ. ಎಲ್ಲರಂತೆ ತಾನೂ ಯಾವುದಾದರೊಂದು ಕೆಲಸಕ್ಕೆ ಸೇರಿ ಇಷ್ಟ ಬಂದದ್ದೆಲ್ಲಾ ಖರೀದಿಸುವೆ ಎಂಬ ತವಕದಲ್ಲಿ ಇದರಿಂದ ಏನು ಪ್ರಯೋಜನ ಎಂದು ಅರಿಯದವರಾಗುತ್ತೇವೆ. ಬದುಕು ಅರ್ಥವಾಗಬೇಕೆಂದು ಮದುವೆ, ಮಕ್ಕಳು. ನನ್ನ ಮಕ್ಕಳಿಗೆ ನಾನೇ ದಿಕ್ಕು ಎಂಬಂತೆ ಎಲ್ಲವನ್ನು ಕೂಡಿ ಹಾಕುವ ಸಮಯ. ಮುಪ್ಪಾಯಿತು, ಅಂಟಿಕೊಂಡದ್ದೆಲ್ಲಾ ಕೊಳೆ ಎಂದರಿವಾದಾಗ, ತೊಳೆದುಕೊಳ್ಳಲು ಶಕ್ತಿಯಿರದ ಪರಿಸ್ಥಿತಿ. ತನು, ಮನಕ್ಕೆರಡಕ್ಕೂ ಮುಪ್ಪು ಹಿಡಿದು ಸುಕ್ಕುಗಟ್ಟಿರುವ ಮುಖದಲ್ಲಿ ಹಳೆಯದನ್ನೆಲ್ಲಾ ಮೆಲುಕು ಹಾಕುತ್ತಾ ಒಂಟಿ ಜೀವವಾಗುತ್ತದೆ. ತಮ್ಮಷ್ಟಕ್ಕೆ ಒಂಟಿಯಾಗಿ ಕುಳಿತು ಆಲೋಚಿಸಲು ಸಾಕಷ್ಟು ಸಮಯ...ಆದರೆ ಆಲೋಚಿಸಿ ಪ್ರಯೋಜನ? ಕಾಲ ಮುಗಿಯಿತು..ಹೋಗುತ್ತೇನೆಯೆಂದು ಹೊರಡುವುದು. ಇದೇ ಸುತ್ತಲು ಕಾಣುತ್ತಿರುವ ಚಿತ್ರಣ.

ಚಿಕ್ಕ ಮಕ್ಕಳನ್ನು ನೋಡಿದರೆ, ಏನೂ ಅರಿಯದ ಮುಗ್ದತೆ...
ಹರಯದವರ ಕಂಡರೆ, ಜೀವನವ ಸವಿಯುವ ಆಸೆ, ಕನಸು...
ಹಿರಿಯರಲ್ಲಿ, ಅನುಭವದ ಪ್ರತಿಬಿಂಬ...
ಒಂದಕ್ಕೊಂದು ಅಂಟದಂತೆ, ಅರಿವಿಲ್ಲದಂತೆ ನಡೆದು ಹೋಗುತ್ತದೆ....

ಏಕೆ ಹೀಗೆ...ಎಲ್ಲಿಂದ ಬಂದೆವು? ಎಲ್ಲಿದ್ದೇವೆ? ಎಲ್ಲಿಗೆ ಹೋಗುತ್ತೇವೆ? ಚಿಕ್ಕಂದಿನಿಂದ ಕಾಡಿದ ಪ್ರಶ್ನೆಗಳು... ಆಗ, ಒಂದೆರಡು ನಿಮಿಷ ಬೆಚ್ಚಿಬಿದ್ದಂತಾಗಿ ’ಇದು ಅರಿವಾಗದ ವಿಷಯ’ ಎಂದು ಬಿಟ್ಟೆ. ಈಗ, ಅರಿಯಲು ಯತ್ನಿಸುತ್ತೇನೆ...ಆದರೆ ’ಹೌದು, ಇದು ಸರಿ’ ಎಂದು ಹೇಳುವವರಾರು?

’ಒಂಟಿಯಾಗಿ ಬಂದೆವು, ಒಂಟಿಯಾಗೇ ಹೋಗುತ್ತೇವೆ’, ನಿಜ, ಆದರೆ...ಒಂಟಿ ಬದುಕು ಆರಂಭವಾದರೆ, ಸುತ್ತಲೂ ಇರುವ ಕಲ್ಲು ಬಂಡೆಗಳಿಗೂ, ಸಂತೋಷವನ್ನೂ,ನೋವನ್ನೂ ಹಂಚಲಾಗದ ಜೀವವಿರುವಂತೆ ಕಾಣುವ ಮರ ಗಿಡಗಳಿಗೂ ಯಾವ ಬೇಧವಿಲ್ಲ.

ಆದರೆ...ಈ ರೀತಿ ಆಲೋಚನೆ ಮಾಡುವ ಗುಣವಿದ್ದು, ಮಾನವರು ಎಂದೆನಿಸಿಕೊಂಡ ನಾವು ಒಂಟಿಯಾಗಿ ಸಾಗಿಹೋಗುವುದು ನಿಜವಾದರೂ..ನಮ್ಮ ಬರುವಿಕೆಗೇ ಹಲವರು ನಮ್ಮ ದಾರಿ ಹಿಡಿದು ಕಾದರೆ....ಆಲೋಚಿಸಿ....!!! ಅಂಥ ಏನೆಲ್ಲಾ ಕೆಲಸಗಳು ನಮ್ಮಿಂದ ಸಾಧ್ಯ???

Wednesday, February 23, 2011

ಒಂದೇ ಒಂದು ’ ಛಾಟಿ’ ಏಟು...!




ನನಗೇ ಏಕೆ ಹೀಗೆ..? ನಾನ್ಯಾಕೆ ಹುಟ್ಟಿದ್ದೇನೆ? ಈ ದೇವರೇ ಇಲ್ಲವೇ....

ಹೀಗೆ, ನಾವು ಅಂದುಕೊಂಡ ಹಾಗೆ ಆಗಲಿಲ್ಲವೆಂದರೆ ನಮಗೇ ತಿಳಿಯದಂತೆ ನಮ್ಮಲ್ಲೇ ಯಾವಾಗಲೂ ಅಡಗಿರುವ ಈ ಪ್ರಶ್ನೆಗಳು ಮೇಲೇಳುತ್ತವೆ. ಆ ಹೊತ್ತಿಗಷ್ಟೆ ಆದ ಅನುಭವದ ಜೊತೆ ಹಿಂದೆಂದೋ ನಮ್ಮೊಟ್ಟಿಗಾದ ಕಹಿ ಅನುಭವಗಳೆಲ್ಲಾ ಒಮ್ಮೆಲೇ ತೆರೆದು ಈ ಪ್ರಪಂಚವೆಲ್ಲಾ ನಮ್ಮೆದುರು ಯುದ್ದಕ್ಕೆ ನಿಂತಂತೆ ಭಾವಿಸುತ್ತೇವೆ. ಕಣ್ಣಲ್ಲಿ ಧಾರಾಕಾರ ನೀರು ತುಂಬಿಟ್ಟುಕೊಂಡು ಮನಸ್ಸಲ್ಲಿ ಹಲವಾರು ಪ್ರತಿಙ್ನೆಗಳು ಮಾಡಿಬಿಡುತ್ತೇವೆ. ’ಇನ್ನು ಈ ಜನ್ಮದಲ್ಲಿ ಅವರನ್ನು ಮಾತನಾಡಿಸುವುದಿಲ್ಲ...’, ’ನಾನಿಷ್ಟೆ ಎಲ್ಲರಿಗೂ ಬೇಡವಾಗಿದ್ದೇನೆ..’, ಹೀಗೆ ನಮಗೇ ಗೊತ್ತಿಲ್ಲದಂತೆ ನಮ್ಮಲ್ಲೇ ಅಡಗಿರುವ ’ಕಲ್ಪನ’, ’ಲಕ್ಷ್ಮಿ’, ’ಶೃತಿ’ ಎಲ್ಲರೂ ಒಟ್ಟಿಗೆ ಗೋಳಿಡಲು ಆರಂಭಿಸುತ್ತಾರೆ.

ಒಮ್ಮೊಮ್ಮೆ ಕೆಲವೊಂದು ಮಕ್ಕಳು ಹಠ ಹಿಡಿಯುವುದನ್ನು ನೋಡಿದ್ದೇವೆ. ಹಠ ಹಿಡಿದಿರುವುದನ್ನು ನೋಡಿದ ಅದರ ಅಮ್ಮ ಕೊನೆಗೆ ಬೇಸತ್ತು ಒಂದೆರಡು ಏಟು ಕೊಟ್ಟ ಮೇಲೆ...ಅದು ಅತ್ತು ನಿಲ್ಲಿಸಿ ಮಲಗುತ್ತದೆ. ಆದರೆ ಆ ಏಟು ಆ ಕ್ಷಣದ ಹಠಕ್ಕೆ ಅಷ್ಟೆ. ಮತ್ತೆ ಅದೇ ಹಠ ಮರುದಿನ ಒಂದಲ್ಲ ಒಂದು ಆಸೆಯಿಂದ ಶುರುವಾಗುತ್ತದೆ. ಇದನ್ನೆ ನಮ್ಮ ಬದುಕಿಗೆ ಒಮ್ಮೆ ಹೊಂದಿಸಿ ನೋಡಿದರೆ, ನಮ್ಮ ವಯಸ್ಸು ಬೆಳೆಯುತ್ತಾ ಬಂದಂತೆ, ಆಸೆಗಳು ಹೆಚ್ಚುತ್ತಿರುತ್ತವೆ. ಒಮ್ಮೊಮ್ಮೆ ಆಸೆ ಈಡೇರದಿದ್ದರೆ, ಪ್ರಪಂಚ ನಮ್ಮ ವಿರುದ್ದ ಕಾಣುತ್ತದೆ. ಮನಸ್ಸು ಹಠಹಿಡಿಯುತ್ತದೆ. ಬುದ್ದಿ ಮಂಕಾಗುತ್ತದೆ. ಇದು ಅಮ್ಮ, ಅಪ್ಪನಿಂದ ತೀರಿಸುವ ಚಿಕ್ಕ ಪುಟ್ಟ ಆಸೆಯಾಗಿದ್ದರೆ ಯಾರಾದರೊಬ್ಬರಿಂದ ಈಡೇರಿಸಿಕೊಳ್ಳುತ್ತೇವೆ, ಇಲ್ಲದಿದ್ದರೆ ನಮ್ಮ ಬದುಕಿನ ಮರೆಯಲಾಗದಂತ ಛಾಟಿ ಏಟು ತಿಂದು ಎಚ್ಚೆತ್ತುಕೊಳ್ಳಬೇಕಾಗುತ್ತದೆ.

ಕೆಲವೊಂದು ಘಟನೆಗಳು ನಮಗೆ ಬುದ್ದಿ ಕಲಿಸಲೆಂದೇ, ಎಂದು ನಾನು ನಂಬುತ್ತೇನೆ. ನಮ್ಮ ಒಂದೊಂದೇ ಕೆಟ್ಟ ಸ್ವಭಾವಗಳಿಂದ ನಮ್ಮನ್ನು ದೂರ ಸರಿಸಲು ಆ ದೇವರ ಛಾಟಿ ಏಟೆಂದು ಭಾವಿಸುತ್ತೇನೆ. ನಾನು ಇದರಿಂದ ಕಲಿತಿರುವಂತೆ, ನಾವು ಓದಿ ಪಡೆದುಕೊಳ್ಳುವ ಡಿಗ್ರಿಗಳು ನಮ್ಮ ಬದುಕನ್ನು ಕಾಲಕ್ಕೆ ತಕ್ಕಂತೆ ನಡೆಯಲು ಅಷ್ಟೆ. ಆದರೆ ನಮ್ಮ ಭಾವನೆಗಳನ್ನು ಎಷ್ಟರ ಮಟ್ಟಿಗೆ ನಮ್ಮ ಹಿಡಿತದಲ್ಲಿಟ್ಟುಕೊಂಡು ನಮ್ಮ ಇರುವಿಕೆಯ ಉದ್ದೇಶವನ್ನು ಅರಿಯುತ್ತೆವೆಯೋ ಅದಕ್ಕಿಂತ ಒಳ್ಳೆಯ ಪಾಠ ಬೇರಾವುದು ಕಲಿಯಬೇಕಾಗಿಲ್ಲ.

ಏನನ್ನೋ ಕಳೆದುಕೊಂಡಂತೆಯೇ ಯಾವಾಗಲೂ ಇರುವ ನಾವು ಪ್ರತಿಯೊಂದನ್ನು ಸಂಪಾದಿಸಿದಾಗಲೂ, ಮತ್ತೊಂದಕ್ಕೆ ಹೊಂಚು ಹಾಕುತ್ತೇವೆ. ನಿಲ್ಲದ ನಮ್ಮೀ ಹುಡುಕಾಟಕ್ಕೆ ನಮ್ಮ ಬಾಳನ್ನು ದೂಷಿಸುತ್ತೇವೆ. ಇದರ ಬದಲು ಒಮ್ಮೆ ನಮ್ಮಲ್ಲಿರುವ ಎಲ್ಲವನ್ನು ಒಮ್ಮೆ ಕಣ್ಣು ತೆರೆದು ನೋಡಿದರೆ, ನಮ್ಮಷ್ಟು ಖುಷಿ ಪಡುವವರು ಇರುವುದಿಲ್ಲ. ಏಳುವಾಗ, ಮಲಗುವಾಗ ಒಮ್ಮೆ ಖುಷಿಯಿಂದ, ನಗು ಮುಖದಿಂದ ನೋಡಿ,ನಮ್ಮಲ್ಲಿರುವ ಎಲ್ಲವನ್ನು ಒಮ್ಮೆ ಮನನ ಮಾಡಿಕೊಂಡರೆ ಸಾಕು. ಬೇಕು ಬೇಕೆನ್ನುವ ಪಟ್ಟಿ ಸರಿಯುತ್ತದೆ. ಎಷ್ಟೇ ಆಸೆಗಳಿದ್ದರೂ ನಮಗೆ ಒಳ್ಳೆಯ ನಿದ್ದೆ,ನೆಮ್ಮದಿಯ ಊಟ,ಮಾತನಾಡಲು ನಮ್ಮವರೆನ್ನಲು ಇರದಾಗ ಬಾಳಿಗೆ ಅರ್ಥವಿಲ್ಲ.

’ಕಾಣದಾ ಕಡಲಿಗೆ ಹಂಬಲಿಸಿದೇ ಮನ,
ಕಾಣಬಲ್ಲೆನೇ ಒಂದು ದಿನ
ಕಡಲನು ಸೇರಬಲ್ಲೆನೇ ಒಂದು ದಿನ...’

ಎಂಬ ಕವಿಯ ಮನಸ್ಸು ಯಾವ ಸ್ಥಿತಿಯಲ್ಲಿತ್ತೋ, ಆದರೆ ಒಮ್ಮೆ ಈ ಸಾಲುಗಳನ್ನು ನಾವು ದುಃಖದಲ್ಲಿದ್ದಾಗ ಓದಿದರೆ ನಮಗೇ ಬರೆದಂತೆ ಕಾಣುತ್ತದೆ. ಆದರೆ ಸಂತೋಷದಲ್ಲಿದ್ದಾಗ ಮನಸ್ಸಿಗೆ ಇದು ಒಂದು ಹಾಡಷ್ಟೆ..
ಯಾವುದದು ಕಡಲು? ನಮ್ಮ ಆಸೆಗಳ ಕಡಲೇ, ಅದಕ್ಕೆ ಮಿತಿಯಿಲ್ಲ... ನಮ್ಮ ಬಾಳಿಗೆ ಸಿಗಬೇಕೆನ್ನುವ ಮುಕ್ತಿಯ ಕಡಲೆ, ಸಿಕ್ಕಿದಾಗ ಅದರ ಸಂತೋಷವನ್ನು ಹಂಚುವುದಾದರೂ ಯಾರ ಜೊತೆ?

ಪರೀಕ್ಷೆಯಲ್ಲಿ ನಪಾಸದೆನೆಂದು, ಯಾರಿಂದಲೋ ಅವಮಾನವಾಯಿತೆಂದು, ಪ್ರೀತಿಮಾಡಿದವರು ಸಿಗಲಿಲ್ಲವೆಂದೂ, ಮದುವೆ ಮುರಿಯಿತೆಂದು, ಯಾವ ಕೆಲಸವೂ ಫಲಿಸದೆಂದು...ಹೀಗೆ ನಮ್ಮ ಗೋಳು ಹತ್ತು ಹಲವು. ಆದರೆ ನಮಗೆ ಬಂದರಷ್ಟೇ ನಮಗದರ ಪ್ರಭಾವ ತಟ್ಟುವುದು, ಇಲ್ಲದಿದ್ದರೆ ಅದಕ್ಕೆ ನಮ್ಮಲ್ಲಿ ಸಿದ್ದ ಉಪದೇಶಗಳುಂಟು. ನಾವು ಎಷ್ಟೇ ಜಾಗರೂಕರಾಗಿ ಮುಂದಿನ ಹೆಜ್ಜೆಯಿಟ್ಟರೂ ಎಡುವುದಕ್ಕೆ ಹತ್ತಾರು ಅಡಚಣೆಗಳಿರುವುದಂತೂ ನಿಜ. ಆದರೆ ನನ್ನ ಪ್ರಕಾರ ಈ ರೀತಿಯ ಗೋಳುಗಳು ಜೀವನದ ಕಥೆಯನ್ನೇ ಮುಗಿಸಿದೆ ಎಂದು ಸಾಯುವುದಕ್ಕೆ ಕ್ಷಣಗಣನೆ ಮಾಡುವ ಬದಲು, ಬದುಕಲು ಉಳಿದಿರುವ ಅಲ್ಪ ಸಮಯದಲ್ಲಿ ಏನೆಲ್ಲಾ ನಮ್ಮಿಂದ ಆಗಬಹುದು ಎಂದು ನಮ್ಮನ್ನು ನಾವು ಅರಿಯಬಹುದು.

ಹಠ ಮಾಡಿ, ಹೊಡೆತ ತಿಂದ ಮಗು ಮತ್ತೆ ತನ್ನ ಆಟ ಪಾಠಗಳಲ್ಲಿ ತೊಡಗಿ, ಮತ್ತದೇ ತಪ್ಪು ಮಾಡುವಾಗ ಎಚ್ಚರವಹಿಸುವಂತೆ, ನಾವೂ ನಮ್ಮ ತಪ್ಪುಗಳನ್ನು ಅರಿತರೆ ಚೆನ್ನಾಗಿರುತ್ತದೆ. ಏನನ್ನು ಸಾಧಿಸಲಿಕ್ಕಾಗದಿದ್ದರೂ ಈ ಸುಂದರ ಮಾಯಾ ಜಗತ್ತಿನ ಸೌಂದರ್ಯವನ್ನು ಸವಿಯುತ್ತಾ ಯಾರೊಬ್ಬರಿಗಾದರೂ ಮುಂದಿನ ಬಾಳಿನ ದೀಪದಂತಾದರೆ ಅಷ್ಟೇ ಸಾಕಲ್ಲವೇ?

ಯಾಕ್ರೀ ಬೇಕು ಈ ಗೋಳು...? ಇಂತಹ ಪರಿಸ್ಥಿತಿಗಳು ಬಂದಾಗ ಬೇರೆಯವರು ಏನನ್ನುತ್ತಾರೋ ಎಂದು ಹೆದರುತ್ತೇವೆ, ಹೋಗಿ ಮತ್ತೊಬ್ಬರ ಉಪದೇಶ ಕೇಳಿ ಹಾಳಾಗುತ್ತೇವೆ. ಬುದ್ದಿ ಬೆಳೆದಿದ್ದರೆ ಆ ದೇವರ ಒಂದು ಛಾಟಿ ಏಟಿನ ನೋವು ಅರಿವಾದರೆ ಮಾತ್ತೊಬ್ಬರ ಉಪದೇಶವಾದರೂ ಯಾಕೆ? ನಮ್ಮನ್ನು ಈ ನಮ್ಮ ಪರಿಸರ ಇಷ್ಟು ದಿನ ಸಹಿಸಿರುವುದು ನಮ್ಮ ಅಳುವಿಗಾ? ನಾವ್ಯಾವುದಾದರೂ ಮನಸ್ಸಿಗೆ ದುಃಖಕೊಡುವಂಥಹ ಘಟನೆಗೆ ಒಳಗಾಗಿದ್ದರೂ ಅದಕ್ಕೆ ಅಳಲಾಗುವುದು ಕೇವಲ ಕೆಲವು ದಿನಗಳು ಮಾತ್ರ, ಕಾಲವಿದನ್ನೆಲ್ಲಾ ಮರೆಸಿಬಿಡುತ್ತದೆ...ಹೀಗಿರುವಾಗ ಒಮ್ಮೆ ಕಣ್ಣು ತೆರೆದು ನಮಗಾಗಿ ನಮ್ಮ ಇರುವಿಕೆಗಾಗಿ ಬಾಳುವುದರಲ್ಲಿ ತಪ್ಪಿಲ್ಲವೆನಿಸುತ್ತದೆ.



ಇದಕ್ಕೆ ಒಂದೇ ಒಂದು ’ ಛಾಟಿ’ ಏಟು ಸಾಕು!!! ನೀವೇನನ್ನುತ್ತೀರ...?





Sunday, November 7, 2010

ಈ ಪ್ರಯತ್ನಕ್ಕೆ ಖರ್ಚಿಲ್ಲ....

ಮೂರು ದಿನದಿಂದ ಎಲ್ಲಿ ನೋಡಿದರೂ ಬೆಳಕು, ಶಬ್ಧ, ಹೊಸ ಬಟ್ಟೆ. ಸಿಹಿ ತಿಂಡಿಗಳ ಸುವಾಸನೆ ಒಂದೆಡೆಯಾದರೆ ಮತ್ತೊಂದೆಡೆ ಪಟಾಕಿಗಳ ಹೊಗೆಯ ಘಾಟು... ದೂರದರ್ಶನದ ಪ್ರತಿಯೊಂದು ಛಾನೆಲ್ ನಲ್ಲೂ ’ಹೊಚ್ಚ ಹೊಸ ಚಲನಚಿತ್ರ’ ಗಳ ಕೂಗು, ಹರಟೆ ಕಾರ್ಯಕ್ರಮಗಳು, ದಿನಪತ್ರಿಕೆಗಳಲ್ಲೆಲ್ಲಾ ರಿಯಾಯಿತಿ (ದರದಲ್ಲಿ?) ಮಾರಾಟಗಳು. ಮನೆಯ ಯಜಮಾನರಿಗೆ ಪೂಜೆ ಸಡಗರವಾದರೆ, ಹೆಂಗಸರಿಗೆ, ಪಕ್ಕದ ಮನೆಗಿಂತ ನಮ್ಮ ಮನೆಯ ಅಡುಗೆಯ ಪರಿಮಳ ಏನು ಕಮ್ಮಿ ಎಂದು ಪೈಪೋಟಿಯಲ್ಲಿ ಹಬ್ಬದಡಿಗೆಯ ಸಂಭ್ರಮ, ಸಂಜೆಯೆಲ್ಲ ಸಿಂಗಾರ.


ನವದಂಪತಿಗಳಿಗೆ ಎಲ್ಲಿ ನೋಡಿದರೂ ಸಿಹಿ ತಿಂಡಿಗಳು. ಚಿಕ್ಕ ಮಕ್ಕಳಿಗೆ ಮತಾಪುಗಳು, ಸುರು ಸುರು ಬತ್ತಿಗಳು, ಕಿರುಚಿ ಅಳುತ್ತಿರುವ ಮಕ್ಕಳನ್ನು ಎತ್ತಿಕೊಂಡು ಪಟಾಕಿ ಹತ್ತಿಸುತ್ತಿರುವ ಅಪ್ಪ, ಚಿಕ್ಕಪ್ಪ ಅಥವಾ ಮಾವ. ಮಾರು ದೂರದಿಂದ ಪಟಾಕಿ ಹೊಡಯಲೇಬೇಕು ಎನ್ನುವ ಪ್ರಯತ್ನದಲ್ಲಿ ನಿರಂತರವಾಗಿ ತೊಡಗಿರುವ ಹೆಂಗಸರು. ನಮ್ಮ ದೂರದರ್ಶನದ ನಿರೀಕ್ಷಿಸಿದ ಕಾಯಕ್ರಮಗಳು...

ನನಗೀ ’ದೀಪಾವಳಿ’ ಎಂದರೆ ಅದೇನೋ ಒಂದು ರೀತಿಯ ಸಂತೋಷ ಇರುತ್ತಿತ್ತು ಚಿಕ್ಕಂದಿನಲ್ಲಿ...ಆ ಪಟಾಕಿ ಹೊಡೆಯುವ ಉತ್ಸಾಹ, ಸುತ್ತಲೂ ಬೇರೆಯವರು ಹೊಡೆಯುವುದನ್ನು ಕಾದು ನೋಡುವ ಆಸೆ. ದೀಪಕ್ಕೆ ಇರುವ ಮಹತ್ವ ಆಗ ತಿಳಿಯದಿದ್ದರೂ...ಈ ಪಟಾಕಿಯನ್ನು ಯಾಕೆ, ಯಾರು ಕಂಡುಹಿಡಿದರು, ನಿಜವಾಗಲೂ ಇವೆಲ್ಲಾ ಹಿಂದೆಯೂ ಚಾಲ್ತಿಯಲ್ಲಿತ್ತಾ ಎನ್ನುವ ಹಲವು ಪ್ರಶ್ನೆಗಳು ಕಾಡುತ್ತಿತ್ತಷ್ಟೆ. ಈಗ ಆ ಪಟಾಕಿ ಹೊಡೆಯುವ ಆಸೆ, ಉತ್ಸಾಹ ಅಷ್ಟಿಲ್ಲ ಆದರೆ ನನಗನ್ನಿಸುವುದು, ನಮ್ಮ ಮನಸ್ಸಿನ ಹಾಗು ಬುದ್ದಿಯ ದೀಪವನ್ನು ಹಚ್ಚದೆ ನಾವು ಆಚರಿಸುವ ಯಾವ ದೀಪಾವಳಿಗೂ ಅರ್ಥವಿಲ್ಲವೆಂದು.

ಯಾರಿಗೂ ತೊಂದರೆ ಕೊಡದೆ ನನ್ನಷ್ಟಿಗೆ ಬದುಕಿ ಸಾಯುತ್ತೇನೆನ್ನುವ ಹಲವಾರು ಮಾನವರು ಅವರೊಂದು ಮೃಗಕ್ಕೆ ಸಮಾನರೆಂದು ಅರಿಯರು. ನಮ್ಮ ಹುಟ್ಟಿಗೊಂದು ಮಹತ್ವವಿದೆಯೆಂದು ಆದಷ್ಟು ಬೇಗ ಅರಿತು, ’ಲೈಫು ಇಷ್ಟೇ’ ಆದರೂ ಅದರ ಸಂಪುರ್ಣ ಸಾರವನ್ನು ಅರಿಯಬೇಕೆನಿಸುತ್ತದೆ. ಈ ದೀಪಾವಳಿಯ ದೀಪದೊಳಗಿನ ಆ ಬತ್ತಿಯಂತೆ, ತನ್ನನ್ನೇ ಉರಿಸಿ ಸುತ್ತಲೆಲ್ಲರಿಗೂ ಸಂತೋಷವನ್ನಿತ್ತಂತೆ, ನಾವೂ ಕೈಲಾದಷ್ಟು ಬೇರೆಯವರ ಸಂತೋಷಕ್ಕಾಗಿ ನಮ್ಮ ಜೀವನವನ್ನು ಮುಡುಪಾಗಿಡಬಹುದಲ್ಲವೇ? ಇದಕ್ಕೆ ದೊಡ್ಡ ದೊಡ್ಡ ಸಮಾಜ ಸೇವೆಗಳಾಗಲೀ, ಹೆಚ್ಚಿನ ಆರ್ಥಿಕ ಸಹಾಯವಾಗಲೀ ಬೇಕಿಲ್ಲ, ನಮ್ಮ ಸುತ್ತಲಿನ ಜನರೊಂದಿಗೆ ಆದಷ್ಟು ಸಂತೋಷದ ಮಾತುಗಳಿಂದ ನಮಗೆಷ್ಟೇ ಸಂಕಟಗಳಿದ್ದರೂ, ಪರಚಿ ಪರಚಿ ಗಾಯವನ್ನು ಹುಣ್ಣಾಗಿಸುವ ಮಂಗನಂತಾಗದೆ, ದೀಪದ ಬತ್ತಿಯಂತಾಗಬಹುದೆನಿಸುತ್ತದೆ. ಒಮ್ಮೆ ಪ್ರಯತ್ನಿಸಿ ನೋಡಿ..ಯಾಕೆಂದರೆ ನನ್ನ ಅನುಭವದಂತೆ ಇದೊಂದು ಸುಂದರ ಪರಿಣಾಮವನ್ನಿತ್ತಿದೆ. ಒಮ್ಮೊಮ್ಮೆ ಮನಸ್ಸು ಮುದುಡಿ ಮೂಲೆ ಸೇರಿ ಅಳುವುದೇನೋ ಎನ್ನುವ ಸಮಯದಲ್ಲಿ ಅದನ್ನೆಲ್ಲಾ ಪಕ್ಕಕ್ಕೆ ಇಟ್ಟು ಒಳ್ಳೆಯ ಕಾರ್ಯದ ಬಗ್ಗೆ ಯೋಚಿಸಲು ಪ್ರಾರಂಭ ಮಾಡುವುದೇ ಮನಸ್ಸು ಹುರುಪಿನಿಂದ ನಲಿಯುವಂತೆ ಮಾಡುತ್ತದೆ...ಕತ್ತಲೆಯಿಂದ ಬೆಳಕಿನೆಡೆಗೆ ಹೋಗಲು ನಾವೇ ಹುಡುಕಿಕೊಳ್ಳಬಹುದಾದ ದಾರಿ, ನಮ್ಮ ಹಳೆಯ ಕೆಟ್ಟ ಆಗುಹೋಗುಗಳನ್ನು, ನಮ್ಮೊಳಗೇ ಅಡಗಿರುವ ಕೆಟ್ಟ ವ್ಯಕ್ತಿತ್ವವನ್ನು ಉರಿಸಿ ನಮ್ಮ ಮುಂದಿರುವ ಒಳ್ಳೆಯ ದಾರಿಗೆ ನಾವೇ ದೀಪವಾಗುವುದು...

Thursday, September 30, 2010

ಎಲ್ಲಿ ಕಳೆಯಿತು ಸಮಯ...


"ಡಾಕ್ಟ್ರೇ, ಮಗು ಹುಟ್ಟಿದ ಸಮಯ ಸರಿಯಾಗಿ ಗುರುತಿಸಿದ್ದೀರಾ? ಜಾತಕ ತಪ್ಪಾಗ ಬಾರದು...ಅದಕ್ಕೆ ಕೇಳಿದೆ" ಹೀಗೆ ಒಬ್ಬ ವ್ಯಕ್ತಿ ಮಾತಾಡಿದ್ದನ್ನು ಕೇಳಿ ನಗು ಬಂತು. ಅಷ್ಟು ಸರಿಯಾಗಿ ಸಮಯ ಗುರುತಿಸಿರುತ್ತಾರಾ? ನಮ್ಮ ಜಾತಕ ಒಂದೊಂದು ಕ್ಷಣದ ಮೇಲೆ ನಿಂತಿದೆ ಅಂದರೆ ನಮ್ಮ ಜಾತಕ ಖಂಡಿತ ನಮ್ಮದಲ್ಲವೇನೊ ಎಂದು. ಹೀಗೆ ಈ ಸಮಯದ ಕುರಿತು ಯೋಚಿಸುತ್ತಾ ಹೋದಾಗ ನನಗನ್ನಿಸಿದ್ದು, ’ಮಗು ಮಲಗುವ ಹೊತ್ತಾಯಿತು","ಏಳುವ ಹೊತ್ತಾಯಿತು","ಊಟದ ಹೊತ್ತಾಯಿತು"...ಓದುವಾಗ ಆಟಕ್ಕೆ ಸಮಯವಾಯಿತೆಂದು, ಆಡುವಾಗ ಓದುವ ಸಮಯವಾಯಿತೆಂದು ಯೋಚನೆ. ಕಾಲೇಜು ಮೆಟ್ಟಿಲು ಹತ್ತಿದಾಗ ಕೆಲಸ, ಮದುವೆ ಹೀಗೆ ಸಮಯ ಆಗಿಹೋಗುತ್ತಿದೆಯೆಂದು ನಮ್ಮನ್ನೇ ನಾವು ಗಡಿಯಾರದಂತೆ ಮಾಡಿಕೊಂಡು ಎಲ್ಲಿಗೆ ಓಡುತ್ತಿದ್ದೇವೆ?

ಹೋದವಾರ ಮೈಸೂರಿನ ಚಾಮುಂಡಿಪುರದ ಮಲ್ಲಿಗೆ ಸೇವಾ ಸಂಘದವರು ಆಯೋಜಿಸಿದ್ದ ಶ್ರೀ ಶಂಕರ್ ಶಾನುಭಾಗ್ ರವರ ಸಂಗೀತ ಕೇಳುತ್ತಿದ್ದಾಗ ಅವರ ಕೆಲವು ಮಾತುಗಳು ಸತ್ಯವೆನಿಸಿತು. ಅವರು ಹಾಡಿನೊಂದಿಗೆ ಕೆಲವು ಒಳ್ಳೆಯ ಹಿತವಚನಗಳನ್ನು ಹೇಳುತ್ತಿದ್ದರು. "ಬ್ಯಾಂಕಿನಲ್ಲಿ ನಾನು ೩೦ ವರುಷ ಸರ್ವೀಸ್ ಮಾಡಿದ್ದೇನೆ" ಅನ್ನುತ್ತಾರಲ್ಲ, ಅದೇನು ಸರ್ವೀಸ್ ರ್ರೀ? ಯಾರಿಗೆ ಸರ್ವ್ ಮಾಡಿದ್ದಾರೆ ಅವರು? ಅವರ ಹೆಂಡತಿ ಮಕ್ಕಳಿಗಾಗಿ ತಾನೆ...ಅದು ಅವರ ಕೆಲಸ ಮುಗಿಸಿಕೊಂಡು ಹೋಗುತ್ತಿದ್ದರು ಅಷ್ಟೆ ಯಾರಿಗಾದರು ಒಂದಷ್ಟು ಸಹಾಯ ಹಸ್ತ ಬೆಳೆಸಿದ್ದಾರ..ಏತಕ್ಕೆ ಅವರಿಗೆ ಸನ್ಮಾನ ಎಂದಾಗ ಹೌದೆನಿಸಿತು. ಜೀವನವಿಡಿ ಒಂದಷ್ಟು ಸ್ನೇಹಿತರನ್ನು ಮತ್ತಷ್ಟು ಶತ್ರುಗಳನ್ನು ಸಂಪಾದಿಸುತ್ತೇವೆ. ಈ ಯಾಂತ್ರಿಕ ಬದುಕಿನಲ್ಲಿ ನಮ್ಮವರೆಂದು ಹೇಳಿಕೊಳ್ಳುವುದಕ್ಕೆ ಇಲ್ಲದಿದ್ದರೂ ಆಶ್ಚರ್ಯವಿಲ್ಲ. (ಈಗಿನ ನಮ್ಮ ಪೀಳಿಗೆಯನ್ನು ನೋಡಿದರೆ ಎಲ್ಲೋ ಇಬ್ಬರೊ ಮೂವರು ಮಿತ್ರರಿದ್ದರು ಅವರು ಫೋನ್ ನಲ್ಲಿ...ಮತ್ತೆಲ್ಲ ಇಂಟರ್ನೆಟ್ ಮಿತ್ರರು..ಅವರಿಗೆ ನಾವು gmail/orkut/facebook/twitter/blog ಗಳಲ್ಲಿ ಕಾಣದಿದ್ದಾಗ "ಓ ಇವರೆಲ್ಲೋ ವಿಧಿವಶರಾದರು" ಎಂದು ತಿಳಿಯಬೇಕು ಅವರು ಅಷ್ಟೆ..!!! )

ಬಾಲ್ಯ, ಯೌವ್ವನ, ವೃದ್ದಾಪ್ಯ ಎಂದು ನಮ್ಮ ಜೀವನದಲ್ಲಿ ಕೆಲವು ಪರಿಮಿತಿಗಳನ್ನು ಹಾಕಿಕೊಂಡು ಯಾವುದಕ್ಕೊ ಅರ್ಥಕೊಡದೆ ಸಾರಹೀನ ಬದುಕ ಬಾಳಿ ಮಾಯವಾಗುತ್ತೇವೆ. "ಸ್ವಾಮಿ..ಯಾಕೆ ಈ ಮಾನವ ಜನ್ಮ ಎಲ್ಲಿಂದ ಬಂದೆ? ಯಾಕೆ ಬಂದೆ, ಹೇಗೂ ಹೋಗುತ್ತೇನೆ ಸುಮ್ಮನೆ ಯಾಕೆ ಇವೆಲ್ಲ ಹೋದ್ರಾಯ್ತು" ಎನ್ನುವವರಿಗೆ ಇದೆಲ್ಲದರಿಂದ ಓಡುವ ಮನೋಭಾವವಷ್ಟೆ. 
ಮತ್ತೆ ಕೆಲವರು, "ನನಗೆ ೩೦ ಅಷ್ಟೆ, ಇನ್ನು ಸಮಯವಿದೆ ಬಿಡಿ" ಎಂದು, ಯಾರದರೊಬ್ಬರನ್ನು ಪ್ರೀತಿಸಿ (?) ಮದುವೆ ಆಗಿ ನಂತರ ಸಮಯಕ್ಕೆ ತಕ್ಕಂತೆ ಬರುವ ಬದಲಾವಣೆಗಳನ್ನು ಸಹಿಸಲಾಗದೆ ಮದುವೆಯಾದವಳನ್ನು ಮನೆಯಿಂದ ದೂರವಿಟ್ಟು "ನನ್ನ ಸಮಯ ಸರಿಯಿಲ್ಲ" ಎಂದುಕೊಳ್ಳುತ್ತಾರೆ! ನಂತರ ಹೆಂಡತಿ ಬೇಕೆನಿಸಿ ಈಗಿರುವ ತುಂಬಾ ಸುಲಭ ಸಂಪರ್ಕ, ಮೊಬೈಲ್ ನಂಬರ್ ಇದೆಯಲ್ಲ ಎಂದು ೪೦ ಆದರೂ ಸಮಯ ತಳ್ಳುತ್ತಾರೆ, ಆದರೆ ಒಳ್ಳೆಯ ಬದಲಾವಣೆಗೆ ಧೈರ್ಯ ಬಾರದು. "ಬರುತ್ತಾಳೆ ಬಿಡು ಎಲ್ಲಿಗೆ ಹೋಗುತ್ತಾಳೆ" ಎನ್ನುವ ಧೈರ್ಯ ಅವರಿಗೆ. ತಮ್ಮ ಕನಸುಗಳೆಲ್ಲಾ ಕಗ್ಗತ್ತಲಲ್ಲಿ ಕರಗಿ ಹೋಗುತ್ತಿರುವುದು, ಸಮಯವೆತ್ತಲೋ ಪ್ರೀತಿಯ ನೆನಪಲ್ಲಿ ಉಳಿದುಹೋಗಿರುವುದು ಸಮಯಕ್ಕೆ ಸರಿಯಾಗಿ ತಿಳಿದಿದ್ದರೆ...ಅದಕ್ಕೆ ಅನಿಸುತ್ತೆ ದೇವರು ಮರೆವೆಂಬ ಔಷಧಿಯನ್ನು ಇಟ್ಟಿರೋದು :) ಒಡೆದ ಮನಸ್ಸುಗಳಿಗೆ ಸಮಯವು ಮರೆವೆಂಬ ಮದ್ದಿನಿಂದ ಪ್ರೀತಿಯನ್ನು ಮುಚ್ಚಿ ಹಾಕುತ್ತದೆ. ಇಬ್ಬರೂ ಮತ್ತೆ ಅದೇ ಪ್ರೀತಿ ಬೇಕೆಂದರೂ ದುರಭಿಮಾನಗಳ, ವಾದ ವಿವಾದಗಳ, ಅನುಮಾನಗಳ ಸುಳಿಯಲ್ಲಿ ಸಿಕ್ಕಿ ದಡವನೆಂದೂ ಸೇರರು.

ಜೀವನ ಆನಂದಭರಿತವಾಗಿದ್ದಾಗ ಒಂದರೆಕ್ಷಣ ನಮ್ಮೊಳಗಿನ ಆನಂದವನ್ನು ಮೆಲಕು ಹಾಕಲೂ ಸಮಯ ದೊರೆಯದು, ಆದರೆ ಯಾಂತ್ರಿಕ ಬದುಕಿನಲ್ಲಿ ಮುಳುಗಿ ಎಲ್ಲರಿಂದ ದೂರವಾದ ಮೇಲೆ ನಿಶ್ಶಬ್ದತೆ ಸದ್ದು ಕಾಲವನ್ನು ನಿಲ್ಲಿಸಿ ಚಿತ್ರಹಿಂಸೆ ಕೊಟ್ಟಂತಾಗುತ್ತದೆ.

ಒಮ್ಮೆ ಯೋಚಿಸೋಣ:
-ಸೂರ್ಯ, ಚಂದ್ರರಷ್ಟೇ ನಮ್ಮ ಗಡಿಯಾರಗಳಾದರೆ? (ಬೇಗ ಎದ್ದು ಆಕಾಶದಲ್ಲಿ ಸೂರ್ಯನನ್ನು, ಸಂಜೆ ಆಫೀಸಿನಿಂದ ಆಚೆ ಬಂದು ಮೋಡದಲ್ಲಿರುವ ಚಂದ್ರನನ್ನು ನೋಡಬೇಕಷ್ಟೆ)

- ಮುಂಜಾನೆ ರಂಗೋಲಿ ಇಡುತ್ತಾ ಅಕ್ಕ ಪಕ್ಕದ ಮನೆಯವರನ್ನು, ಹೂವು-ಹಣ್ಣು ಮಾರುವವರನ್ನು ಕರೆದು ಕಾಫಿ ಕೊಟ್ಟರೆ? (ನೀರು ಬೆರೆಸಿದ ಹಾಲಿನವನಿಗೆ ಅದೇ ಹಾಲಿನ ಕಾಫಿ ಕೊಡುವ ಮಜವೂ ಸಿಗಬಹುದು :))

- ಪ್ರೀತಿ ಮಾಡುವವರಿಗೆ ಮೊಬೈಲ್ ಸೀಮಿತ ಅವಧಿಗೆ ಮಾತ್ರ, ಮದುವೆ ಆದರಂತೂ ಇಬ್ಬರ ಬಳಿಯಲ್ಲೂ ಮೊಬೈಲ್ ಇರಕೂಡದು ಹಾಗೂ ಇಬ್ಬರೂ ಒಂದೇ ಊರಿನಲ್ಲಿದ್ದರಷ್ಟೆ ಕೆಲಸ ಎಂದು ಕಾನೂನು ಇದ್ದರೆ...(ಇಲ್ಲ ಎಂದರೆ ಮಕ್ಕಳಿಗೆ ಅಪ್ಪ, ಅಮ್ಮನ ಚಿತ್ರಗಳೂ ಇರದೆ ಮೊಬೈಲ್ ನಂಬರ್ ಇರುತ್ತದೆ ಅಷ್ಟೆ)

- ಮಕ್ಕಳಿಗೆ ಕಡ್ಡಾಯ ಸಂಜೆ ಕತ್ತಲಾಗುವವರೆಗೂ ಆಟ. ನಂತರ ದೇವರ ಸ್ಮರಣೆ. ಮಕ್ಕಳಿರುವ ಮನೆಗೆ ಅಂತರ್ಜಾಲ ಸಂಪರ್ಕ, ೧೮ ವರುಷದ ತನಕ ಯಾವ ರಿಯಾಲಿಟಿ ಶೋ ನಲ್ಲೂ ಪ್ರವೇಶವಿಲ್ಲದಿದ್ದರೆ...(ಆಹಾ! ಕೈ ಕಾಲೆಲ್ಲ ಮಣ್ಣು ಮಾಡಿಕೊಂಡು ಸುಸ್ತಾಗಿ ಬಂದು ಮನೆಯಲ್ಲಿ ಕೂತರೆ...)

-ಹೆಂಗಸರಿಗೆ ವಾರದ ಮೂರು ದಿನವಷ್ಟೆ ಆಫೀಸಿನಲ್ಲಿ ಕೆಲಸ, ಮತ್ತೆರಡು/ಮೂರು ದಿನ ಮನೆಯಲ್ಲಿ ಕೆಲಸ ಕಡ್ಡಾಯವಾದರೆ..
(ಅಯ್ಯೋ..ಊಹಿಸಿದರೇನೆ ಎಷ್ಟು ಸುಖವೆನಿಸುತ್ತದೆ)

-ನಿವೃತ್ತರಾದವರಿಗೆ ಬೀದಿಗೊಂದು ಹರಟೆ ಕಟ್ಟೆ. ತಿಂಗಳಿಗೊಮ್ಮೆ ಮಕ್ಕಳ ಜೊತೆ ಪ್ರವಾಸ...(ನೆನಪಿರಲಿ ನಾವೂ ನಿವೃತ್ತರಾಗುತ್ತೇವೆ ಮುಂದೆ!!!)

 ನಮ್ಮ ಗಡಿಯಾರವನ್ನು ನಿಲ್ಲಿಸಿ, ಯೋಚಿಸೋಣವೇ?

ಒಂದು ಚಿಕ್ಕ ವಿಷಯ, ಆದರೆ ಈ ಬರಹಕ್ಕೆ ತಕ್ಕಂತೆ ನಡೆಯಿತು... ಇದೆ ಈ ಬ್ಲಾಗ್ ಬರೆಯುವಾಗ...ಮೊದಲು ನಾನು ಈ ಬರಹವನ್ನು ’ಬರಹ’ದಲ್ಲಿ ಪೋಣಿಸಿ ಎಲ್ಲಾ Save ಮಾಡಿದ್ದೆ...ಇದ್ದಕ್ಕಿದ್ದಂತೆ laptop restart ಆಗಿದ್ದರಿಂದ ಬರೆದದ್ದೆಲ್ಲಾ ಮಾಯವಾಯಿತು! Laptop ಗೆ ಸರಿಯಾದ ಸಮಯದಲ್ಲಿ ವಿದ್ಯುತ್ ಸಂಪರ್ಕ ಸಿಗದೆ ಅದು ನಾನು ಬರೆದಿದ್ದನ್ನೆಲ್ಲಾ ಹಾಳುಮಾಡಿತು. ನಾನು ಆ ಫೈಲ್ ನಲ್ಲಿರುವ ಬರಹವನ್ನು ಮತ್ತೆ ಪಡೆಯಲು ಎಷ್ಟೇ ಪ್ರಯತ್ನ ಪಟ್ಟರೂ ಸಾಧ್ಯವಾಗಲಿಲ್ಲ. ಮತ್ತೆ ಬರೆಯಲು ಕುಳಿತೆ, ರಾತ್ರಿ ೧೨ ಆಗಿತ್ತು, ಈಗ ಬೇಡವೆಂದು shutdown ಮಾಡಿದೆ. ನನ್ನ ಸಹೋದ್ಯೋಗಿಯೊಬ್ಬರು recovery tools ಇದೆ ಮೇಡಮ್ ಅಂದರು, ಖುಷಿಯಾಯಿತು, ಆದರೆ ಫೈಲ್ ತಾಂತ್ರಿಕ ದೋಷದಿಂದ ಹಾಳಾಗಿದ್ದರಿಂದ ಸಾಧ್ಯವಾಗಲಿಲ್ಲ ಎಂದಾಗ ನನ್ನ ಮನಸ್ಸಿಗೆ ಬಂದ ವಾಕ್ಯ: "ಒಡೆದ ಮುತ್ತು, ಕಳೆದ ಕ್ಷಣ ಯಾವುದೂ ಮತ್ತೆ ಸಿಗದು...ಹಾಗೆ corrupted file!!! :)". ನನ್ನ ಬರಹದ ವಿಷಯಕ್ಕೆ ತಕ್ಕಂತೆ ಈ ರೀತಿಯಾಗಿದ್ದು ಒಂದು ಕಾಕತಾಳೀಯ...

Tuesday, September 14, 2010

ನಮಗಿದು ಸಾಧ್ಯವೇ???

ಈ ಸಲದ ಮನನದ ಶೀರ್ಷಿಕೆ ಚಿಕ್ಕದಾದರೂ, ವಿಷಯ ದೊಡ್ಡದಾಗಿ ಬರೆದಿದ್ದೇನೆ. ಪೂರ್ತಿ ಓದಲು ಸಮಯವಾಗದಿದ್ದರೆ, ಸ್ವಲ್ಪ ಸ್ವಲ್ಪವಾಗಿ ಓದಿ ಮನನ ಮಾಡಿಕೊಳ್ಳಲು ಮತ್ತೆ ಮತ್ತೆ ಈ ನನ್ನ ಅಂಕಣಕ್ಕೆ ಭೇಟಿ ಕೊಡುತ್ತೀರ ಎಂದು ಭಾವಿಸುತ್ತೇನೆ...

ಹೀಗಿದ್ದರೆ ಪ್ರೀತಿಯಿಂದ, ಸಾಧಾರಣ ಬದುಕು ಸುಖವಾಗುವುದೇನೊ!!!
 ಬೆಂಗಳೂರು, ಎಲ್ಲರನ್ನೂ ತನ್ನತ್ತ ಸೆಳೆದು ತನ್ನ ಮಾಯಾಮೋಹದಲ್ಲಿ ಅಪ್ಪಿ ಹಿಡಿದಿಡುವ ತಾಣ. ನೆರೆಮನೆಯವರು ಯಾರೆಂದು ಅರಿಯದಿದ್ದರೂ ಊರಲ್ಲಿರುವ ಎಲ್ಲಾ ಶಾಪಿಂಗ್ ಮಳಿಗೆಗಳು ಕಣ್ಣಿಗೆ ರಂಗು ರಂಗಾದ ಆಕರ್ಷಣೆಯಿಂದ ತನ್ನತ್ತ ಸೆಳೆದಿಟ್ಟಿರುತ್ತದೆ. ತಮಗಿಷ್ಟ ಬಂದ ಕೆಲಸದಲ್ಲಿ ತೊಡಗಿಸಬಹುದಾದ, ಸ್ವೇಚ್ಛೆಗೆ ಹೇಳಿ ಮಾಡಿಸಿದ ಸ್ಧಾನ. ಇದೊಂದು ರೀತಿ ನನ್ನ ಮನದ ಭಾವನೆಗಳನ್ನು ಹುಚ್ಚೆಬಿಸಿದ ಊರು. ಇಲ್ಲಿಗೆ ಬಂದ ಸಂದರ್ಭ ಹಾಗಿತ್ತೋ ಅಥವಾ ಮೈಸೂರಿಗಿಂತ ವೈವಿಧ್ಯಮಯ ಬದುಕಿನ ಚಿತ್ರಣ ಇಲ್ಲಿರುವದರಿಂದಲೋ ಅಥವಾ ಒಬ್ಬರೇ ಇದ್ದಾಗ ಯೋಚನೆಗಳು ಸ್ವಚಂದವಾಗಿ ಹರಿಯುವುದರಿಂದಲೋ ತಿಳಿಯದು.

ಹೀಗೆ ಮನೆಯಿಂದ ದೂರ ಕೆಲಸಕ್ಕಾಗಿ ಪಿ.ಜಿ. ಯಲ್ಲಿ ಇದ್ದಾಗ ಜಯನಗರದ ಜೈನ್ ದೇವಸ್ಥಾನದ ಮುಂದೆ ಒಂದು ಶನಿವಾರದ ಸಂಜೆಯ ಬೇಜಾರನ್ನು ಕಳೆಯಲು ಹೋಗಿದ್ದೆ. ಅಮೃತ ಶಿಲೆಯ ಆ ಬೃಹತ್ತಾದ ಕಟ್ಟಡದೊಳಗೆ, ಎಲ್ಲವನ್ನೂ ತ್ಯಜಿಸಿದ ಮಹಾವೀರನ ಸನ್ನಿಧಿ ಇದ್ದರೆ, ಆ ಗೇಟ್ ನ ಮುಂಭಾಗದಲ್ಲಿ ಒಂದು ಚಿಕ್ಕ ಮಗುವು ಮೇಲೊಂದು ತುಂಡು ಅಂಗಿಯುಟ್ಟು ನನ್ನ ಪಕ್ಕ ಬಂತು. ಎಣ್ಣೆಯನ್ನೇ ಕಾಣದ ಈಗಿನ್ನೂ ಬೆಳೆಯಲೆತ್ನಿಸುತ್ತಿರುವ ಕೂದಲು ಅದರ ಪುಟ್ಟ ತಲೆಯ ಮೇಲೆ. ಅದು ತನ್ನಷ್ಟಕ್ಕೆ ತಾನು ಕಡ್ಡಿ ಕಲ್ಲುಗಳನ್ನು ಹಿಡಿದುಕೊಂಡು ಫುಟ್ ಪಾತ್ ನಲ್ಲಿ ಆಡುತ್ತಿತ್ತು. ಒಂದು ವಿಧದಲ್ಲಿ ಅದಕ್ಕೆ ನಮ್ಮೀ ಪ್ರಪಂಚದ ಯಾವ ಆಕರ್ಷಣೆಗಳೂ ಇಲ್ಲ, ಆಧುನಿಕ ಪ್ರಪಂಚದ ಒತ್ತಡವಿಲ್ಲ. ತನ್ನ ಪ್ರಪಂಚದಲ್ಲಿ ಮುಗ್ಧ ವಾತಾವರಣ. ಆದರೆ ಇದ್ದಕ್ಕಿದ್ದಂತೆ ಅಲ್ಲಿ ಅಳು ಕೇಳಿಸಿತು. ಆ ಮಗುವು ಹಸಿವಾದಂತೆ ಅಳುತ್ತಿತ್ತು. ಪಕ್ಕದ ಕಬ್ಬಿಣದ ಕಂಬಿಗಳ ಪಕ್ಕದಲ್ಲಿ ಮಾಸಿದ ಬಣ್ಣ ಬಣ್ಣದ ಚಿಂದಿ ಬಟ್ಟೆಗಳ ಹರಡಿಕೊಂಡು ಕುಳಿತಿದ್ದ ಇಬ್ಬರು ಮೂವರು ಹೆಂಗಸರ ಬಳಿ ಓಡಿತು. ಅದರಲ್ಲಿ ಒಬ್ಬ ವಯಸ್ಸಾದ ಹೆಂಗಸು. ಅವರ ಪಕ್ಕದಲ್ಲಿ ಈ ಮಗುವಿಗಿಂತ ೨-೩ ವರುಷ ದೊಡ್ಡವರಾದಂತ ಮತ್ತಿಬ್ಬರು ಮಕ್ಕಳು. ಒಂದು ಗಂಡು ಒಂದು ಹೆಣ್ಣು. ಅಳುತ್ತಿದ್ದ ಆ ಮಗುವಿಗೆ ಸಮಾಧಾನ ಹೇಳಿ ಆ ಹೆಂಗಸು ತಿನ್ನಕ್ಕೆಂದು ಹಳಸಿದ ಆಹಾರವನ್ನು ಕೂಡಿಹಾಕಿಟ್ಟುಕೊಂಡ ಕವರ್ ಗಳಲ್ಲೆಲ್ಲಾ ಹುಡುಕುತ್ತಿದ್ದಳು. ಅಷ್ಟೊತ್ತಿಗಾಗಲೆ ಜಯನಗರದ ಬಸ್ಸು ನಿಲ್ದಾಣದ ಕಡೆಯಿಂದ ಯುವಕರು ಬಣ್ಣ ಬಣ್ಣದ ಬೆಲೂನ್ ಗಳೊಂದಿಗೆ ಮಾಸಿದ ಬಟ್ಟೆಯಲ್ಲಿ ಅಲ್ಲಿಗೆ ಬಂದರು. ಅಳುತ್ತಿದ್ದ ಆ ಮಗುವಿಗೆ ತಮಗ್ಯಾರೊ ಕೊಟ್ಟಂಥ ಚಾಕೊಲೇಟ್ ಅನ್ನು ಕೊಟ್ಟು ಸುಮ್ಮನಾಗಿಸಿದರು. ಆ ಸ್ಥಳದಲ್ಲಿ ಸುಮ್ಮನೆ ಹಾದು ಹೋದರೂ ದುರ್ವಾಸನೆ ಹೊಡೆಯುತ್ತಿತ್ತು. ಇದನ್ನೆಲ್ಲಾ ಸುಮ್ಮನೆ ಫುಟ್ ಪಾತ್ ಮೇಲೆ ನಿಂತು ನೋಡುತ್ತಿದ್ದ ನನಗೆ ಅಲ್ಲಿಗೆ ಬಂದ ಮಧ್ಯವಯಸ್ಕನಂತಿದ್ದ ಮನುಷ್ಯ ಇವರ ಯಜಮಾನನೆನಿಸಿತು. ಅಷ್ಟೊತ್ತಿಗಾಗಲೆ, ಸುಮಾರು ಮಳೆ ಬರುವಂತಾಯಿತು. ತಮ್ಮ ಎಲ್ಲಾ ಬಟ್ಟೆಗಳನ್ನು ಹಾಗೂ ಬಲೂನಿಗೆ ಕಟ್ಟಿಕೊಳ್ಳಲು ಇಟ್ಟುಕೊಂಡ ಬಿದಿರಿನ ಕಡ್ಡಿಗಳನ್ನು ಹೊತ್ತು ಹಸುಗೂಸುಗಳೊಡನೆ ಎದ್ದರು. ಹೆಂಗಸರು, ಮಕ್ಕಳು ಎಲ್ಲಾ ಒಣಕಲು ಮೈಯಿನವರೆ...ಕೈಯಲ್ಲಿ ಎಷ್ಟೇ ಚೀಲಗಳಿದ್ದರೂ ತನ್ನ ಮಗುವನ್ನು ಆ ತಾಯಿ ಹೆಗಲ ಮೇಲೆ ಹೊತ್ತಿದ್ದಳು. ಆ ಮಕ್ಕಳಿಗೆಂದೂ ನಾವು ವಾಸಿಸಬೇಕಾಗಿರುವುದು ಮನೆಯೊಂದರಲ್ಲಿ ಎನ್ನುವ ಸಣ್ಣ ಊಹೆಯೂ ಬಂದಿಲ್ಲ.

ಎಲ್ಲಿಗೆ ಹೋಗುವರು? ರಾತ್ರಿ ಜೋರಾಗಿ ಮಳೆ ಬಂದರೆ ಏನು ಮಾಡುವರು? ಆ ಹಸುಗೂಸುಗಳ ಕಥೆಯೇನು?ಛಳಿಗೆ ಹೊದಿಕೆಗಳಿವೆಯೇ? ಏನಾದರು ತಿನ್ನಲು ಸಿಗುವುದೋ ಇವರಿಗೆ? ಹೀಗೆಲ್ಲಾ ಯೋಚನೆ ಬರುತ್ತಿದ್ದಾಗ ನಾನು ಆಶ್ಚರ್ಯವಾಗಿ ಕಂಡದ್ದು ಅವರೆಲ್ಲರ ಮುಖಗಳಲ್ಲಿ ಆ ಮಕ್ಕಳನ್ನು ಆಡಿಸುತ್ತಾ ನಡೆದ ನಗು.

ಅದೇ ದಾರಿಯ ಮತ್ತೊಂದೆಡೆ swift ಕಾರಿನಲ್ಲಿ ಬಂದಿಳಿದ ಬ್ರ್ಯಾಂಡೆಡ್ ಸಲ್ವಾರ್ ಹಾಕಿದ್ದ ಯುವತಿ ತನ್ನ ಹೊಟ್ಟೆಗೆ ಅವುಚಿ ಕಟ್ಟಿದ್ದ ೨-೩ ವರುಷದ ಮಗುವಿನ ಕಡೆ ನನ್ನ ಗಮನ ಹೋಯಿತು. ಆತ ಕಾರು ನಿಲ್ಲಿಸಲು ಹರಸಾಹಸದಲ್ಲಿದ್ದ. ಆಕೆಯ ಮೈ ತೂಕ ಹಾಗೂ ಹಾಕಿದ್ದ ಎತ್ತರವಾದ ಚಪ್ಪಲಿ ನೋಡಿದವರಾರು ಈಕೆ ಮಗುವನ್ನು ಹೆಗಲ ಮೇಲೆ ಎತ್ತಿ ಕೊಳ್ಳದ ಸ್ಥಿತಿಯಲ್ಲಿದ್ದಾಳೆಂದು ಹೇಳರು. ಇದೆಲ್ಲಾ ಶ್ರೀಮಂತರ ಅನಾವಶ್ಯಕ ಅರ್ಥವಿಲ್ಲದ ಪಾಶ್ಚಾತ್ಯ ಅನುಕರಣೆಗಳು. ಮಗುವನ್ನು ಅವುಚಿಕೊಂಡಿದ್ದು ಸಾಕಾದರೆ ಗಾಡಿಯಲ್ಲಿ ಮಲಗಿಸಿ ನೂಕಿಕೊಂಡು ಹೋಗಲು ವಾಕರ್ ಅನ್ನು ಕೈಯಲ್ಲಿ ಮಡಿಚಿ ಹಿಡಿದುಕೊಂಡಿದ್ದರು. ಆತ ಅಲ್ಲೇ ಇದ್ದ ಎ.ಟಿ.ಎಮ್. ಗೆ ಹೋಗಿ ಬೇಕಾದಷ್ಟು ಹಣ ಬಿಡಿಸಿಕೊಂಡು ಬಂದ. ಇಬ್ಬರೂ ಅಲ್ಲೇ ಇದ್ದ ಒಂದು ದೊಡ್ಡ ಹೊಟೆಲ್ ಗೆ ಹೋದರು. ಆ ಹೆಂಗಸಿನ ಮುಖದಲ್ಲಾಗಲಿ ಆತನ ಮುಖದಲ್ಲಾಗಲಿ ಖುಷಿ ಕಾಣಲಿಲ್ಲ. ಆತ ಮೊಬೈಲ್ ಗೆ ಬರುತ್ತಿದ್ದ ಕರೆಗಳಲ್ಲಿ ಕಿವಿಯನ್ನು ಭುಜದ ಮೇಲಿಡುವದರಲ್ಲಿ ಹೆಚ್ಚಾಗಿ ಕಂಡನೇ ಹೊರತು ಆಕೆಯ ಜೊತೆ ಮಾತನಾಡಿದುದು ಕಾಣಲಿಲ್ಲ.

ಈ ಎರಡು ದೃಶ್ಯಗಳು ಮನಸ್ಸಿನಲ್ಲಿ ವಿಚಿತ್ರವಾದ ತರ್ಕಕ್ಕೆ ಕಾರಣವಾಯಿತು. ಏಕೆ ಆ ಮೊದಲಿನ ಕುಟುಂಬ ಅಷ್ಟೊಂದು ಹರಕಲು ಬಟ್ಟೆಯಲ್ಲಿಯಾದರು ಖುಷಿಯಾಗಿದೆ? ಎರಡನೆ ಕುಟುಂಬವೇಕೆ ಎಷ್ಟೇ ಇದ್ದರೂ ಏನೋ ಕಳೆದುಕೊಂಡಂತಿದೆ? ಮೊದಲನೇ ಕುಟುಂಬಲ್ಲಿ ನನಗೆ ಕಂಡ ಇನ್ನೊಂದು ವಿಷಯವೆಂದರೆ,, ಎಷ್ಟೊಂದು ಜನ, ಆದರೆ ಎರಡನೆ ದೃಶ್ಯದಲ್ಲಿ ಕಂಡದ್ದು ಇಬ್ಬರೇ!

ಆ ಬಲೂನ್ ಮಾರುವ ಅಲೆಮಾರಿ ಕುಟುಂಬದ ಯಜಮಾನನ ಬದುಕಿನ ದೃಶ್ಟಿಕೋನವಾದರೂ ಏನು? ಯಾವ ಆಧಾರವಿಲ್ಲದಿದ್ದರೂ ಹೇಗೆ ಎಲ್ಲರನ್ನೂ ಹೊತ್ತು ಸಾಗು(ಕು)ತ್ತಿದ್ದಾನೆ? ಯಾಕೆ ಅವರನ್ನೆಲ್ಲಾ ಬಿಟ್ಟು ಹೋಗಲಿಲ್ಲ? ಇದರೊಟ್ಟಿಗೆ ಹೇಗೆ ಮದುವೆ ಮಕ್ಕಳು!! ಮಕ್ಕಳಿಗೆ ಜೀವನವೇ ಕೊಡಲು ಆಗದು ಎಂದರಿತಿದ್ದರೂ ಅದನ್ನು ಬೇಡವೆನ್ನುವುದಿಲ್ಲ. ಇದು ಅವನ ತಪ್ಪು ನಿರ್ಧಾರವೆಂದನಿಸಿದರೂ ಅದರಿಂದ ಅವನಿಗೊಂದು ಸಂತೋಷವಿದೆ ಹಾಗೂ ಅದರಲ್ಲಿ ಅವನ, ಭಂಡ ಧೈರ್ಯವಿದೆ. ಆ ಹೆಂಗಸರಾದರೋ ಎಷ್ಟೇ ಕಿತ್ತಾಟಗಳಿದ್ದರೂ ಒಟ್ಟಿಗೆ ಹೇಗೆ ಸಾಗುತ್ತಿದ್ದಾರೆ. ಹೂ.................ಸಾಕಾಯ್ತು ನನಗೆ ಬಂದ ಪ್ರಶ್ನೆಗಳನ್ನು ಹಿಡಿದಿಡಲು. ಉತ್ತರವೆಲ್ಲಿ ಇವಕ್ಕೆಲ್ಲಾ?

ಆ ಅಲೆಮಾರಿಗಳಲ್ಲಿರುವ ಒಗ್ಗಟ್ಟು, ಪ್ರೀತಿ, ಬದುಕಿನ ಬಗ್ಗೆಯ ಆಸೆ ಅಥವಾ ಬಂದದ್ದನ್ನು ಎದುರಿಸುವ ಯಾವೊಂದು ಧೈರ್ಯವೂ ನಮಂತವರಲ್ಲಿಲ್ಲ. ಆಧುನಿಕ ಬದುಕಲ್ಲಿ ಸಮಯಕ್ಕೆ ತಕ್ಕಂತೆ ಬದಲಾಗುವುದು ನಿಜವಾದರೂ ನಮ್ಮ ಜೀವನದ ಕನಿಷ್ಟ ಅಂಶ, ಆನಂದವನ್ನು ಗಾಳಿಗೆ ತೂರಿದ್ದೇವೆ. ನಾವು ಅನಾವಶ್ಯಕವಾಗಿ ಬದಲಾಗಿದ್ದೇವೆ ಎನ್ನುವ ಅರಿವೂ ನಮಗಿಲ್ಲ. ಇದರಿಂದ ಸಂಸಾರದಲ್ಲಿ ಹೆಚ್ಚಾಗಿ ಅತ್ಯಾಧುನಿಕ ಉಪಕರಣಗಳು ತುಂಬಿದೆಯೇ ಹೊರತು ಬದುಕಲು ಬೇಕಾದ ಯಾವ ನೈಜ ಯೋಚನೆಗಳೂ ಇಲ್ಲ. ತನ್ನ ಸಂಸಾರವನ್ನು ಸಾಕಲು ಎಷ್ಟು ಬೇಕೋ ಅದೆಲ್ಲಕ್ಕಿಂತ ಹೆಚ್ಚಾಗಿ ಇದ್ದರೂ ಸಂಸಾರವನ್ನು ಸಾಕಲು ನಮ್ಮಂತವರು ಎಷ್ಟು ಲೆಕ್ಕಾಚಾರ ಹಾಕುತ್ತೇವೆ, ನನ್ನ ಹೆಂಡತಿ, ಮಗು ಎಂದು ಸಾಕಲೂ ಹಿಂಜರಿಯುತ್ತಿರುವವರು, ಎಲ್ಲಾ ಇರುವಂತ ನಮ್ಮಲ್ಲಿ ಹೆಚ್ಚೇ ಹೊರತು, ಈ ಆಕಾಶವನ್ನೇ ಸೂರಾಗಿಸಿರುವ ಆ ಬಡ ಕುಟುಂಬದಲ್ಲಿ ಅಲ್ಲವೆನಿಸುತ್ತಿದೆ. ಕುಟುಂಬಗಳು ಒಡೆದು, ಒಬ್ಬರ ಮೇಲೊಬ್ಬರು ಪ್ರೀತಿ, ವಿಶ್ವಾಸ ಕಳೆದು ಇರುವ ಒಗ್ಗಟ್ಟನ್ನು ಹಾಳು ಮಾಡಿಕೊಂಡು, ಎಲ್ಲಾ ಇದ್ದರೂ ಹಂಚಿ ತಿನ್ನಲು ಯಾರೂ ಇಲ್ಲದಂತೆ ಒಂಟಿಯಾಗುತ್ತೇವೆ.

ಇದರೊಟ್ಟಿಗೆ ಸಂಪಾದಿಸಿದಷ್ಟೂ ಭಯ ಬೆಳೆಸಿಕೊಳ್ಳುತ್ತೇವೆ. ಅತಿ ಆಸೆ ಹೆಚ್ಚುತ್ತಿದೆ. ಎಷ್ಟೇ ಸಂಪಾದನೆಯಿದ್ದರೂ ಮನೆಯ ಯಜಮಾನನಿಗೆ, ಒಂದು ವಾರಾಂತ್ಯ ಹೊಟೆಲ್ ಗೆ ಹೋಗದಿದ್ದರೆ ಏನೋ ಕಳೆದು ಕೊಂಡಂತೆ. ಮನೆಯಲ್ಲಿ ಫ್ರಿಡ್ಜ್, ಹವಾನಿಯಂತ್ರಣ, ಕೇಬಲ್ ಟಿ.ವಿ, ಕಂಪ್ಯೂಟರ್, ಇಂಟರ್ ನೆಟ್,ಮಕ್ಕಳಿಗೆ ಐ.ಸಿ.ಎಸ್.ಇ,ಮನೆಗೊಂದು ಕಾರು, ಮನೆಯಲ್ಲೊಬ್ಬೊಬ್ಬರಿಗೊಂದು ಮೊಬೈಲು, ೩೦-೪೦ ಸಾವಿರ ಸಂಪಾದನೆ ಮುಂತಾದವೆಲ್ಲಾ ಬಹು ಕನಿಷ್ಟ ಅವಶ್ಯಕತೆಗಳು ನಮಗೆ. ಇಂತಹ ಮನೆಯ ಇಂದಿನ ಹಾಗೂ ಮುಂದಿನ ಪೀಳಿಗೆಗೆ ಇವೆಲ್ಲದೆಯೂ ಬದುಕಬಹುದು ಎನ್ನುವ ಕಲ್ಪನೆಯೂ ಕಷ್ಟ.

ಆದರೆ ದಿನದಲ್ಲಿ ಮೂರು ಹೊತ್ತು ಊಟ ಮಾಡುತ್ತೇವೆ, ಮನೆಯೆಂಬ ಜಾಗವೊಂದು ನಮ್ಮ ವಾಸಸ್ಥಾನವೆಂದರಿಯದೆ ಆ ಕುಟುಂಬ ಹೇಗೆ ಬದುಕುತ್ತಿದೆ ಒಂದೇ ಸೂರ್ಯನಡಿಯಲ್ಲಿ? ಅವರಿಗೆ ಹೇಗೆ ಸಾಧ್ಯವಿದು???

ಒಮ್ಮೆ ಇದನ್ನೆಲ್ಲಾ ಸಮಯ ಸಿಕ್ಕಾಗ ಖಂಡಿತ ಯೋಚಿಸಿ, ಈ ಅನವಶ್ಯಕ ಬದಲಾವಣೆಯಿಂದ ನಮಗಾಗುವಷ್ಟು ಬದಲಾಗೋಣ. ವ್ಯರ್ಥವಾಗಿ ಪ್ರಕೃತಿಯ ಸಂಪನ್ಮೂಲಗಳನ್ನು ನಮ್ಮಿಂದ ಹಾಳಾಗದಂತೆ ನೋಡೋಣ, ಇದು ಆ ಬಡ ಕುಟುಂಬದ ಒಂದು ಮಗುವಿಗಾದರೂ ಒಂದು ಹೊತ್ತಿನ ಊಟಕ್ಕೆ ಎಟುಕಬಹುದು. ಇದಕ್ಕಿಂತ ಮುಂಚೆ, ಅವರಿಂದ ನಾವು ಕಳೆದುಕೊಂಡದ್ದನ್ನು ನೋಡಿ ಕಲಿಯೋಣ....ಅವರಿಗೆ ಸಾಧ್ಯವಾದದ್ದು ಕುಟುಂಬದ ಒಗ್ಗಟ್ಟು ಎಲ್ಲಾ ಇರುವ ನಮಗೇಕಾಗದು??

Monday, September 6, 2010

ಬೇಕು ಬೇಕುಗಳ ಜಾತ್ರೆ....

ಸ್ವಾಭಾವಿಕವ ಮರೆತು ನಭಕೇಣಿ ಹೂಡುವುದುಮ್ |
ಆಭಾಸವನು ಸತ್ಯವೆಂದು ಬೆಮಿಸುವುದುಮ್ ||
ಸೌಭಾಗ್ಯಗಳನರಸಿ ದೌರ್ಭಾಗ್ಯಕೀಡಹುದುಮ್ |
ಅಭಿಶಾಪ ನರಕುಲಕೆ - ಮಂಕುತಿಮ್ಮ ||




"ಅಬ್ಬಾ ಶುರುವಾಯ್ತು ಅರ್ಥವಾಗದೇ ಇರೋ ಒಳ್ಳೆ ಹಳೆಗನ್ನಡದ ಯಾವುದೋ ಜಮಾನದ ಪದ್ಯ...","ಚಲೋ ಹೊರಡೋಣ ನಮಗಲ್ಲ ಇವೆಲ್ಲ ಯಾವುದಾದರು Movie ಗೆ ಹೋಗೋಣ, ಈಗಲಿಂದ ಯಾರು ಕೇಳ್ತಾರೆ ಇವೆಲ್ಲ..ಬೋರು..."

ಇದನ್ನೆಲ್ಲಾ ಕೇಳಿದಾಗ ಈ ನನ್ನ ಭಾವನೆಗಳನ್ನು ನನ್ನ ಈ ಚಿತ್ರದಲ್ಲಿ ಮೂಡಿಸಿದೆ..ಹಾಗೆ ಮನನ ಮಾಡುತ್ತಿದ್ದಾಗ ಬಂದ ಪದಗುಚ್ಚಗಳು ಹೀಗೆ:

ಬೇಕು ಬೇಕುಗಳೇ ಸುಳಿದಿಹ ಜಾತ್ರೆಯಲಿ,
ಸಾಕೆನಲೊಲ್ಲದೀ ಜೇವ.
ಒಂಟಿಯಾಯಿತೊಮ್ಮೆ ಬಾಳ ನೌಕೆಯಲಿ,
ಹೊರಟಿತೆತ್ತಲೋ ಹಂಚದದಾವ ಸುಖವ!!

ಹುಟ್ಟಿದಾಗಿನಿಂದ ಅದು ಬೇಕು ಇದು ಬೇಕು ಎನ್ನುವ ಈ ಮನಸ್ಸು ಎಂದೂ 'ಸಾಕು' ಎನ್ನಲು ಬಯಸದು. ಸ್ವಾಭಾವಿಕವಾಗಿ ಸಿಕ್ಕಿದೆಲ್ಲಕ್ಕಿಂಥ ಆಕಾಶಕ್ಕೆ ಏಣಿ ಇಡಲು ಹೊರಡುವ ನಾವು, ಕತ್ತಲಲ್ಲಿ ಕಂಡ ಹಗ್ಗವನ್ನು ಹಾವೆಂದು ಭ್ರಮಿಸಿ ಅದನ್ನೇ ಸತ್ಯವೆಂದು ಅರಿಯುತ್ತೇವೆ. ಜೀವನದುದ್ದಕ್ಕೂಸೌಭಾಗ್ಯವ ಹುಡುಕುತ್ತಾ ಸರಿಯಾದ ಮಾರ್ಗವನ್ನು ಅರಿಯದೆ ದೌರ್ಭಾಗ್ಯವನ್ನು ಪಡೆಯುತ್ತೇವೆ. ಕೊನೆಯಲ್ಲಿ ಒಂಟಿ ಬಾಳು ಸವೆಸುವ ಸಮಯ ಒದಗಿದಾಗ ಇಲ್ಲಿಯವರೆಗೆ ಬೇಕು ಬೇಕೆಂದು ಪಡೆದ ಯಾವೊಂದನ್ನೂ ತನ್ನವರೊಂದಿಗೆ ಹಂಚಲಾಗದೆ (ತಾನೆ ಸುಖ ಪಡದೆ) ಜೀವನದ ಕೊನೆಯ ಪಯಣ ಬೆಳೆಸುತ್ತೇವೆ.

ಮಂಕುತಿಮ್ಮನ ಕಗ್ಗ, ಇದನ್ನು ಓದುವಾಗ ಮನಸ್ಸಿಗೆ ಬರುವ ಒಂದೇ ಒಂದು ಆಲೋಚನೆ, ಪ್ರತಿಯೊಂದು ಪದವನ್ನು ಅರ್ಥಗರ್ಭಿತವಾಗಿ ಹೊಂದಿಸಿರುವ ಡಿ.ವಿ.ಜಿ. ಯವರ ಅನುಭವದ ಮಾತುಗಳೇ ಇವು ಅಥವಾ ಎಲ್ಲವನ್ನು ಅರಿತುದಾದರೋ ಹೇಗೆ ಎಂದು. ಇದನ್ನೆಲ್ಲ ನಿಜವಾಗಿ ಓದಬೇಕಾಗಿರುವುದು ನಮ್ಮ ಪ್ರೌಢಾವಸ್ಥೆಯಲ್ಲಿ. ಏಕೆಂದರೆ ಪ್ರೌಢಾವಸ್ಥೆ ಒಂದು ನಿರ್ಣಯ ತೆಗೆದುಕೊಳ್ಳುವ ಸಾಮರ್ಥ್ಯವುಳ್ಳ ಘಟ್ಟ ಹಾಗೂ ಅವಸ್ಥೆ. ಇದನ್ನು ನಾವು ಸರಿಯಾಗಿ ನಿಭಾಯಿಸಲು ಡಿ.ವಿ.ಜಿ.ಯವರಂಥ ಅನೇಕ ಮಹಾನ್ ವ್ಯಕ್ತಿಗಳ ಅನುಭವಕ್ಕೆ ಹತ್ತಿರಕ್ಕೆ ಕರೆದೊಯ್ಯುವ ಸೂತ್ರಗಳು ಅತ್ಯಂತ ಮುಖ್ಯ. ಆದರೆ ನಾವು ಅಥವಾ ಈಗಿನ ಆಧುನಿಕ ಬದುಕಿಗೆ ಹೊಂದಿಕೊಂಡು ನಮ್ಮ ಸಂಸ್ಕೃತಿ, ಕಾವ್ಯವನ್ನು ಮರೆತು ಸಾಗುತ್ತಿರುವ ಈ ಯುವ ಪೇಳಿಗೆಗೆ ಇಂಥಹ ಪುಸ್ತಕಗಳು ಬಹು ದೂರ. ಇಂದು ಪ್ರೌಢಾವಸ್ಥೆಯಲ್ಲಿ ಇದನ್ನೆಲ್ಲಾ ಓದಿ ತಿಳಿಯದೆ ನಮಗೆ ಚಾಲೀಸು ಹತ್ತಿದಾಗ ಪುಸ್ತಕವನ್ನು ಹಿಡಿಯಲು ಶಕ್ತಿ ಇಲ್ಲದ ಕೈಯಲ್ಲಿ ದೂರ ಹಿಡಿದು, ಓದಿದ್ದನ್ನು ಮತ್ತೊಬ್ಬರಿಗೆ ಹೇಳಿ ಹಂಚಿ ಆನಂದ ಪಡಲು ಯಾರೂ ಹತ್ತಿರ ಇರದಿರಲು, ಓದಿ ಫಲವೇನು? ಇನ್ನೊಂದು ಹತ್ತೋ, ಇಪ್ಪತ್ತೋ ಆಯುಷ್ಯ ಉಳಿದಿರಲು ನಾವು ಓದುವ ಪುಸ್ತಕ ಇದು ಎಂಬುದು ತಪ್ಪು ಕಲ್ಪನೆ.

ಇದನ್ನೇ ಓದಬೇಕಾದ ಸಮಯದಲ್ಲಿ ಓದಿ, ಬಾಳ ಬೇಕಾದ ವಯಸ್ಸಿನಲ್ಲಿ ಅರಿತು ಬಾಳಿದರೆ ಎಷ್ಟೊಂದು ಕಥೆಗಳು ಇಂತಹ ದಿನನಿತ್ಯದ ಧಾರಾವಾಹಿಗಳಾಗಿ ಹುಟ್ಟುತ್ತಿರಲಿಲ್ಲ. ಈ ಕಥೆಗಳಲ್ಲಿ ನಾವೆಲ್ಲಾ ಒಂದಲ್ಲ ಒಂದು ಸಲ ನಮ್ಮ ಪಾತ್ರಗಳನ್ನು ಗಮನಿಸಿದ್ದೇವೆ. ಒಪ್ಪಿಕೊಂಡು ತಿದ್ದಿಕೊಳ್ಳುವ ಧೈರ್ಯ ಬೇಕು ಅಷ್ಟೆ. ಹೀಗೆ ಒಂದು ಕಪ್ಪು ಚುಕ್ಕೆಯಿರುವ ಜೀವನವನ್ನು ತಿದ್ದಲು, ನಾವು ಇವೆಲ್ಲವನ್ನೂ ಓದಿ ಅರಿತು ತಿದ್ದಿಕೊಳ್ಳುವ ವೇಳೆಗಾಗಲೆ ಯಮನ ಬಾಗಿಲು ನಮಗೋಸ್ಕರ ತೆರೆಯುತ್ತಿರುವುದು ಕಾಣುವುದು. ಆಗ ಸಮಯವೆಲ್ಲಾ ವ್ಯರ್ಥ ಮಾಡಿದೆನಲ್ಲಾ, ಇನ್ನೂ ಬದುಕಿ ನಾ ಸಾಧಿಸುವೆ ಎಂಬ ಹುಮ್ಮಸ್ಸು ಬಂದರೂ ಕಾಲವನ್ನು ತಡೆಯಲಾಗದು.

ಈ ನುಡಿ ಸತ್ಯವಾದರೂ, ಅದನ್ನು ಓದುತ್ತಿರುವ ನಾವು ಎಷ್ಟರ ಮಟ್ಟಿಗೆ ಪಾಲಿಸುತ್ತೇವೆ ಎನ್ನುವುದು ಮುಖ್ಯ. ಕಾಲದ ಸದುಪಯೋಗ ಪಡೆದುಕೊಂಡು ನಮ್ಮ ಹುಟ್ಟಿನ ಉದ್ದೇಶವನ್ನು ಪ್ರತಿಯೊಬ್ಬರೂ ಇಳಿವಯಸ್ಸಿನಲ್ಲಿಯೇ ಅರಿತು ಬಾಳಿದರೆ ನಮ್ಮ ಸುತ್ತಲ ಪರಿಸರ ನಮ್ಮ ಮನಃಸ್ಥಿಥಿಯ ಬಗ್ಗೆ ಒಮ್ಮೆ ಊಹಿಸಿ ....ಒಳ್ಳೆಯ ಚಿತ್ರ ಕಂಡರೆ ಇದೇ ವಿಷಯದ ಮನನದಲ್ಲಿ ಏನಾದರೊಂದು ಬದಲಾವಣೆ ಗುರುತಿಸಿ, ಮುಂದಿನ ನನ್ನ ಹೊಸ ವಿಷಯವನ್ನು ನೋಡಲು ಮತ್ತೆ ಈ ಬ್ಲಾಗ್ ಗೆ ಕ್ಲಿಕ್ಕಿಸುತ್ತೀರ ತಾನೇ..??