Today's Quote...

"Brightness is sun's nature, coolness is
water's nature, heat fire's nature. Similarly the
nature of Atma is Sath (Absolute Existence),
Chith (Absolute Knowledge) Ananda
(Absolute Bliss), Permanence and Purity." - Atmabodha, Aadi Sankaracharya.

Tuesday, September 14, 2010

ನಮಗಿದು ಸಾಧ್ಯವೇ???

ಈ ಸಲದ ಮನನದ ಶೀರ್ಷಿಕೆ ಚಿಕ್ಕದಾದರೂ, ವಿಷಯ ದೊಡ್ಡದಾಗಿ ಬರೆದಿದ್ದೇನೆ. ಪೂರ್ತಿ ಓದಲು ಸಮಯವಾಗದಿದ್ದರೆ, ಸ್ವಲ್ಪ ಸ್ವಲ್ಪವಾಗಿ ಓದಿ ಮನನ ಮಾಡಿಕೊಳ್ಳಲು ಮತ್ತೆ ಮತ್ತೆ ಈ ನನ್ನ ಅಂಕಣಕ್ಕೆ ಭೇಟಿ ಕೊಡುತ್ತೀರ ಎಂದು ಭಾವಿಸುತ್ತೇನೆ...

ಹೀಗಿದ್ದರೆ ಪ್ರೀತಿಯಿಂದ, ಸಾಧಾರಣ ಬದುಕು ಸುಖವಾಗುವುದೇನೊ!!!
 ಬೆಂಗಳೂರು, ಎಲ್ಲರನ್ನೂ ತನ್ನತ್ತ ಸೆಳೆದು ತನ್ನ ಮಾಯಾಮೋಹದಲ್ಲಿ ಅಪ್ಪಿ ಹಿಡಿದಿಡುವ ತಾಣ. ನೆರೆಮನೆಯವರು ಯಾರೆಂದು ಅರಿಯದಿದ್ದರೂ ಊರಲ್ಲಿರುವ ಎಲ್ಲಾ ಶಾಪಿಂಗ್ ಮಳಿಗೆಗಳು ಕಣ್ಣಿಗೆ ರಂಗು ರಂಗಾದ ಆಕರ್ಷಣೆಯಿಂದ ತನ್ನತ್ತ ಸೆಳೆದಿಟ್ಟಿರುತ್ತದೆ. ತಮಗಿಷ್ಟ ಬಂದ ಕೆಲಸದಲ್ಲಿ ತೊಡಗಿಸಬಹುದಾದ, ಸ್ವೇಚ್ಛೆಗೆ ಹೇಳಿ ಮಾಡಿಸಿದ ಸ್ಧಾನ. ಇದೊಂದು ರೀತಿ ನನ್ನ ಮನದ ಭಾವನೆಗಳನ್ನು ಹುಚ್ಚೆಬಿಸಿದ ಊರು. ಇಲ್ಲಿಗೆ ಬಂದ ಸಂದರ್ಭ ಹಾಗಿತ್ತೋ ಅಥವಾ ಮೈಸೂರಿಗಿಂತ ವೈವಿಧ್ಯಮಯ ಬದುಕಿನ ಚಿತ್ರಣ ಇಲ್ಲಿರುವದರಿಂದಲೋ ಅಥವಾ ಒಬ್ಬರೇ ಇದ್ದಾಗ ಯೋಚನೆಗಳು ಸ್ವಚಂದವಾಗಿ ಹರಿಯುವುದರಿಂದಲೋ ತಿಳಿಯದು.

ಹೀಗೆ ಮನೆಯಿಂದ ದೂರ ಕೆಲಸಕ್ಕಾಗಿ ಪಿ.ಜಿ. ಯಲ್ಲಿ ಇದ್ದಾಗ ಜಯನಗರದ ಜೈನ್ ದೇವಸ್ಥಾನದ ಮುಂದೆ ಒಂದು ಶನಿವಾರದ ಸಂಜೆಯ ಬೇಜಾರನ್ನು ಕಳೆಯಲು ಹೋಗಿದ್ದೆ. ಅಮೃತ ಶಿಲೆಯ ಆ ಬೃಹತ್ತಾದ ಕಟ್ಟಡದೊಳಗೆ, ಎಲ್ಲವನ್ನೂ ತ್ಯಜಿಸಿದ ಮಹಾವೀರನ ಸನ್ನಿಧಿ ಇದ್ದರೆ, ಆ ಗೇಟ್ ನ ಮುಂಭಾಗದಲ್ಲಿ ಒಂದು ಚಿಕ್ಕ ಮಗುವು ಮೇಲೊಂದು ತುಂಡು ಅಂಗಿಯುಟ್ಟು ನನ್ನ ಪಕ್ಕ ಬಂತು. ಎಣ್ಣೆಯನ್ನೇ ಕಾಣದ ಈಗಿನ್ನೂ ಬೆಳೆಯಲೆತ್ನಿಸುತ್ತಿರುವ ಕೂದಲು ಅದರ ಪುಟ್ಟ ತಲೆಯ ಮೇಲೆ. ಅದು ತನ್ನಷ್ಟಕ್ಕೆ ತಾನು ಕಡ್ಡಿ ಕಲ್ಲುಗಳನ್ನು ಹಿಡಿದುಕೊಂಡು ಫುಟ್ ಪಾತ್ ನಲ್ಲಿ ಆಡುತ್ತಿತ್ತು. ಒಂದು ವಿಧದಲ್ಲಿ ಅದಕ್ಕೆ ನಮ್ಮೀ ಪ್ರಪಂಚದ ಯಾವ ಆಕರ್ಷಣೆಗಳೂ ಇಲ್ಲ, ಆಧುನಿಕ ಪ್ರಪಂಚದ ಒತ್ತಡವಿಲ್ಲ. ತನ್ನ ಪ್ರಪಂಚದಲ್ಲಿ ಮುಗ್ಧ ವಾತಾವರಣ. ಆದರೆ ಇದ್ದಕ್ಕಿದ್ದಂತೆ ಅಲ್ಲಿ ಅಳು ಕೇಳಿಸಿತು. ಆ ಮಗುವು ಹಸಿವಾದಂತೆ ಅಳುತ್ತಿತ್ತು. ಪಕ್ಕದ ಕಬ್ಬಿಣದ ಕಂಬಿಗಳ ಪಕ್ಕದಲ್ಲಿ ಮಾಸಿದ ಬಣ್ಣ ಬಣ್ಣದ ಚಿಂದಿ ಬಟ್ಟೆಗಳ ಹರಡಿಕೊಂಡು ಕುಳಿತಿದ್ದ ಇಬ್ಬರು ಮೂವರು ಹೆಂಗಸರ ಬಳಿ ಓಡಿತು. ಅದರಲ್ಲಿ ಒಬ್ಬ ವಯಸ್ಸಾದ ಹೆಂಗಸು. ಅವರ ಪಕ್ಕದಲ್ಲಿ ಈ ಮಗುವಿಗಿಂತ ೨-೩ ವರುಷ ದೊಡ್ಡವರಾದಂತ ಮತ್ತಿಬ್ಬರು ಮಕ್ಕಳು. ಒಂದು ಗಂಡು ಒಂದು ಹೆಣ್ಣು. ಅಳುತ್ತಿದ್ದ ಆ ಮಗುವಿಗೆ ಸಮಾಧಾನ ಹೇಳಿ ಆ ಹೆಂಗಸು ತಿನ್ನಕ್ಕೆಂದು ಹಳಸಿದ ಆಹಾರವನ್ನು ಕೂಡಿಹಾಕಿಟ್ಟುಕೊಂಡ ಕವರ್ ಗಳಲ್ಲೆಲ್ಲಾ ಹುಡುಕುತ್ತಿದ್ದಳು. ಅಷ್ಟೊತ್ತಿಗಾಗಲೆ ಜಯನಗರದ ಬಸ್ಸು ನಿಲ್ದಾಣದ ಕಡೆಯಿಂದ ಯುವಕರು ಬಣ್ಣ ಬಣ್ಣದ ಬೆಲೂನ್ ಗಳೊಂದಿಗೆ ಮಾಸಿದ ಬಟ್ಟೆಯಲ್ಲಿ ಅಲ್ಲಿಗೆ ಬಂದರು. ಅಳುತ್ತಿದ್ದ ಆ ಮಗುವಿಗೆ ತಮಗ್ಯಾರೊ ಕೊಟ್ಟಂಥ ಚಾಕೊಲೇಟ್ ಅನ್ನು ಕೊಟ್ಟು ಸುಮ್ಮನಾಗಿಸಿದರು. ಆ ಸ್ಥಳದಲ್ಲಿ ಸುಮ್ಮನೆ ಹಾದು ಹೋದರೂ ದುರ್ವಾಸನೆ ಹೊಡೆಯುತ್ತಿತ್ತು. ಇದನ್ನೆಲ್ಲಾ ಸುಮ್ಮನೆ ಫುಟ್ ಪಾತ್ ಮೇಲೆ ನಿಂತು ನೋಡುತ್ತಿದ್ದ ನನಗೆ ಅಲ್ಲಿಗೆ ಬಂದ ಮಧ್ಯವಯಸ್ಕನಂತಿದ್ದ ಮನುಷ್ಯ ಇವರ ಯಜಮಾನನೆನಿಸಿತು. ಅಷ್ಟೊತ್ತಿಗಾಗಲೆ, ಸುಮಾರು ಮಳೆ ಬರುವಂತಾಯಿತು. ತಮ್ಮ ಎಲ್ಲಾ ಬಟ್ಟೆಗಳನ್ನು ಹಾಗೂ ಬಲೂನಿಗೆ ಕಟ್ಟಿಕೊಳ್ಳಲು ಇಟ್ಟುಕೊಂಡ ಬಿದಿರಿನ ಕಡ್ಡಿಗಳನ್ನು ಹೊತ್ತು ಹಸುಗೂಸುಗಳೊಡನೆ ಎದ್ದರು. ಹೆಂಗಸರು, ಮಕ್ಕಳು ಎಲ್ಲಾ ಒಣಕಲು ಮೈಯಿನವರೆ...ಕೈಯಲ್ಲಿ ಎಷ್ಟೇ ಚೀಲಗಳಿದ್ದರೂ ತನ್ನ ಮಗುವನ್ನು ಆ ತಾಯಿ ಹೆಗಲ ಮೇಲೆ ಹೊತ್ತಿದ್ದಳು. ಆ ಮಕ್ಕಳಿಗೆಂದೂ ನಾವು ವಾಸಿಸಬೇಕಾಗಿರುವುದು ಮನೆಯೊಂದರಲ್ಲಿ ಎನ್ನುವ ಸಣ್ಣ ಊಹೆಯೂ ಬಂದಿಲ್ಲ.

ಎಲ್ಲಿಗೆ ಹೋಗುವರು? ರಾತ್ರಿ ಜೋರಾಗಿ ಮಳೆ ಬಂದರೆ ಏನು ಮಾಡುವರು? ಆ ಹಸುಗೂಸುಗಳ ಕಥೆಯೇನು?ಛಳಿಗೆ ಹೊದಿಕೆಗಳಿವೆಯೇ? ಏನಾದರು ತಿನ್ನಲು ಸಿಗುವುದೋ ಇವರಿಗೆ? ಹೀಗೆಲ್ಲಾ ಯೋಚನೆ ಬರುತ್ತಿದ್ದಾಗ ನಾನು ಆಶ್ಚರ್ಯವಾಗಿ ಕಂಡದ್ದು ಅವರೆಲ್ಲರ ಮುಖಗಳಲ್ಲಿ ಆ ಮಕ್ಕಳನ್ನು ಆಡಿಸುತ್ತಾ ನಡೆದ ನಗು.

ಅದೇ ದಾರಿಯ ಮತ್ತೊಂದೆಡೆ swift ಕಾರಿನಲ್ಲಿ ಬಂದಿಳಿದ ಬ್ರ್ಯಾಂಡೆಡ್ ಸಲ್ವಾರ್ ಹಾಕಿದ್ದ ಯುವತಿ ತನ್ನ ಹೊಟ್ಟೆಗೆ ಅವುಚಿ ಕಟ್ಟಿದ್ದ ೨-೩ ವರುಷದ ಮಗುವಿನ ಕಡೆ ನನ್ನ ಗಮನ ಹೋಯಿತು. ಆತ ಕಾರು ನಿಲ್ಲಿಸಲು ಹರಸಾಹಸದಲ್ಲಿದ್ದ. ಆಕೆಯ ಮೈ ತೂಕ ಹಾಗೂ ಹಾಕಿದ್ದ ಎತ್ತರವಾದ ಚಪ್ಪಲಿ ನೋಡಿದವರಾರು ಈಕೆ ಮಗುವನ್ನು ಹೆಗಲ ಮೇಲೆ ಎತ್ತಿ ಕೊಳ್ಳದ ಸ್ಥಿತಿಯಲ್ಲಿದ್ದಾಳೆಂದು ಹೇಳರು. ಇದೆಲ್ಲಾ ಶ್ರೀಮಂತರ ಅನಾವಶ್ಯಕ ಅರ್ಥವಿಲ್ಲದ ಪಾಶ್ಚಾತ್ಯ ಅನುಕರಣೆಗಳು. ಮಗುವನ್ನು ಅವುಚಿಕೊಂಡಿದ್ದು ಸಾಕಾದರೆ ಗಾಡಿಯಲ್ಲಿ ಮಲಗಿಸಿ ನೂಕಿಕೊಂಡು ಹೋಗಲು ವಾಕರ್ ಅನ್ನು ಕೈಯಲ್ಲಿ ಮಡಿಚಿ ಹಿಡಿದುಕೊಂಡಿದ್ದರು. ಆತ ಅಲ್ಲೇ ಇದ್ದ ಎ.ಟಿ.ಎಮ್. ಗೆ ಹೋಗಿ ಬೇಕಾದಷ್ಟು ಹಣ ಬಿಡಿಸಿಕೊಂಡು ಬಂದ. ಇಬ್ಬರೂ ಅಲ್ಲೇ ಇದ್ದ ಒಂದು ದೊಡ್ಡ ಹೊಟೆಲ್ ಗೆ ಹೋದರು. ಆ ಹೆಂಗಸಿನ ಮುಖದಲ್ಲಾಗಲಿ ಆತನ ಮುಖದಲ್ಲಾಗಲಿ ಖುಷಿ ಕಾಣಲಿಲ್ಲ. ಆತ ಮೊಬೈಲ್ ಗೆ ಬರುತ್ತಿದ್ದ ಕರೆಗಳಲ್ಲಿ ಕಿವಿಯನ್ನು ಭುಜದ ಮೇಲಿಡುವದರಲ್ಲಿ ಹೆಚ್ಚಾಗಿ ಕಂಡನೇ ಹೊರತು ಆಕೆಯ ಜೊತೆ ಮಾತನಾಡಿದುದು ಕಾಣಲಿಲ್ಲ.

ಈ ಎರಡು ದೃಶ್ಯಗಳು ಮನಸ್ಸಿನಲ್ಲಿ ವಿಚಿತ್ರವಾದ ತರ್ಕಕ್ಕೆ ಕಾರಣವಾಯಿತು. ಏಕೆ ಆ ಮೊದಲಿನ ಕುಟುಂಬ ಅಷ್ಟೊಂದು ಹರಕಲು ಬಟ್ಟೆಯಲ್ಲಿಯಾದರು ಖುಷಿಯಾಗಿದೆ? ಎರಡನೆ ಕುಟುಂಬವೇಕೆ ಎಷ್ಟೇ ಇದ್ದರೂ ಏನೋ ಕಳೆದುಕೊಂಡಂತಿದೆ? ಮೊದಲನೇ ಕುಟುಂಬಲ್ಲಿ ನನಗೆ ಕಂಡ ಇನ್ನೊಂದು ವಿಷಯವೆಂದರೆ,, ಎಷ್ಟೊಂದು ಜನ, ಆದರೆ ಎರಡನೆ ದೃಶ್ಯದಲ್ಲಿ ಕಂಡದ್ದು ಇಬ್ಬರೇ!

ಆ ಬಲೂನ್ ಮಾರುವ ಅಲೆಮಾರಿ ಕುಟುಂಬದ ಯಜಮಾನನ ಬದುಕಿನ ದೃಶ್ಟಿಕೋನವಾದರೂ ಏನು? ಯಾವ ಆಧಾರವಿಲ್ಲದಿದ್ದರೂ ಹೇಗೆ ಎಲ್ಲರನ್ನೂ ಹೊತ್ತು ಸಾಗು(ಕು)ತ್ತಿದ್ದಾನೆ? ಯಾಕೆ ಅವರನ್ನೆಲ್ಲಾ ಬಿಟ್ಟು ಹೋಗಲಿಲ್ಲ? ಇದರೊಟ್ಟಿಗೆ ಹೇಗೆ ಮದುವೆ ಮಕ್ಕಳು!! ಮಕ್ಕಳಿಗೆ ಜೀವನವೇ ಕೊಡಲು ಆಗದು ಎಂದರಿತಿದ್ದರೂ ಅದನ್ನು ಬೇಡವೆನ್ನುವುದಿಲ್ಲ. ಇದು ಅವನ ತಪ್ಪು ನಿರ್ಧಾರವೆಂದನಿಸಿದರೂ ಅದರಿಂದ ಅವನಿಗೊಂದು ಸಂತೋಷವಿದೆ ಹಾಗೂ ಅದರಲ್ಲಿ ಅವನ, ಭಂಡ ಧೈರ್ಯವಿದೆ. ಆ ಹೆಂಗಸರಾದರೋ ಎಷ್ಟೇ ಕಿತ್ತಾಟಗಳಿದ್ದರೂ ಒಟ್ಟಿಗೆ ಹೇಗೆ ಸಾಗುತ್ತಿದ್ದಾರೆ. ಹೂ.................ಸಾಕಾಯ್ತು ನನಗೆ ಬಂದ ಪ್ರಶ್ನೆಗಳನ್ನು ಹಿಡಿದಿಡಲು. ಉತ್ತರವೆಲ್ಲಿ ಇವಕ್ಕೆಲ್ಲಾ?

ಆ ಅಲೆಮಾರಿಗಳಲ್ಲಿರುವ ಒಗ್ಗಟ್ಟು, ಪ್ರೀತಿ, ಬದುಕಿನ ಬಗ್ಗೆಯ ಆಸೆ ಅಥವಾ ಬಂದದ್ದನ್ನು ಎದುರಿಸುವ ಯಾವೊಂದು ಧೈರ್ಯವೂ ನಮಂತವರಲ್ಲಿಲ್ಲ. ಆಧುನಿಕ ಬದುಕಲ್ಲಿ ಸಮಯಕ್ಕೆ ತಕ್ಕಂತೆ ಬದಲಾಗುವುದು ನಿಜವಾದರೂ ನಮ್ಮ ಜೀವನದ ಕನಿಷ್ಟ ಅಂಶ, ಆನಂದವನ್ನು ಗಾಳಿಗೆ ತೂರಿದ್ದೇವೆ. ನಾವು ಅನಾವಶ್ಯಕವಾಗಿ ಬದಲಾಗಿದ್ದೇವೆ ಎನ್ನುವ ಅರಿವೂ ನಮಗಿಲ್ಲ. ಇದರಿಂದ ಸಂಸಾರದಲ್ಲಿ ಹೆಚ್ಚಾಗಿ ಅತ್ಯಾಧುನಿಕ ಉಪಕರಣಗಳು ತುಂಬಿದೆಯೇ ಹೊರತು ಬದುಕಲು ಬೇಕಾದ ಯಾವ ನೈಜ ಯೋಚನೆಗಳೂ ಇಲ್ಲ. ತನ್ನ ಸಂಸಾರವನ್ನು ಸಾಕಲು ಎಷ್ಟು ಬೇಕೋ ಅದೆಲ್ಲಕ್ಕಿಂತ ಹೆಚ್ಚಾಗಿ ಇದ್ದರೂ ಸಂಸಾರವನ್ನು ಸಾಕಲು ನಮ್ಮಂತವರು ಎಷ್ಟು ಲೆಕ್ಕಾಚಾರ ಹಾಕುತ್ತೇವೆ, ನನ್ನ ಹೆಂಡತಿ, ಮಗು ಎಂದು ಸಾಕಲೂ ಹಿಂಜರಿಯುತ್ತಿರುವವರು, ಎಲ್ಲಾ ಇರುವಂತ ನಮ್ಮಲ್ಲಿ ಹೆಚ್ಚೇ ಹೊರತು, ಈ ಆಕಾಶವನ್ನೇ ಸೂರಾಗಿಸಿರುವ ಆ ಬಡ ಕುಟುಂಬದಲ್ಲಿ ಅಲ್ಲವೆನಿಸುತ್ತಿದೆ. ಕುಟುಂಬಗಳು ಒಡೆದು, ಒಬ್ಬರ ಮೇಲೊಬ್ಬರು ಪ್ರೀತಿ, ವಿಶ್ವಾಸ ಕಳೆದು ಇರುವ ಒಗ್ಗಟ್ಟನ್ನು ಹಾಳು ಮಾಡಿಕೊಂಡು, ಎಲ್ಲಾ ಇದ್ದರೂ ಹಂಚಿ ತಿನ್ನಲು ಯಾರೂ ಇಲ್ಲದಂತೆ ಒಂಟಿಯಾಗುತ್ತೇವೆ.

ಇದರೊಟ್ಟಿಗೆ ಸಂಪಾದಿಸಿದಷ್ಟೂ ಭಯ ಬೆಳೆಸಿಕೊಳ್ಳುತ್ತೇವೆ. ಅತಿ ಆಸೆ ಹೆಚ್ಚುತ್ತಿದೆ. ಎಷ್ಟೇ ಸಂಪಾದನೆಯಿದ್ದರೂ ಮನೆಯ ಯಜಮಾನನಿಗೆ, ಒಂದು ವಾರಾಂತ್ಯ ಹೊಟೆಲ್ ಗೆ ಹೋಗದಿದ್ದರೆ ಏನೋ ಕಳೆದು ಕೊಂಡಂತೆ. ಮನೆಯಲ್ಲಿ ಫ್ರಿಡ್ಜ್, ಹವಾನಿಯಂತ್ರಣ, ಕೇಬಲ್ ಟಿ.ವಿ, ಕಂಪ್ಯೂಟರ್, ಇಂಟರ್ ನೆಟ್,ಮಕ್ಕಳಿಗೆ ಐ.ಸಿ.ಎಸ್.ಇ,ಮನೆಗೊಂದು ಕಾರು, ಮನೆಯಲ್ಲೊಬ್ಬೊಬ್ಬರಿಗೊಂದು ಮೊಬೈಲು, ೩೦-೪೦ ಸಾವಿರ ಸಂಪಾದನೆ ಮುಂತಾದವೆಲ್ಲಾ ಬಹು ಕನಿಷ್ಟ ಅವಶ್ಯಕತೆಗಳು ನಮಗೆ. ಇಂತಹ ಮನೆಯ ಇಂದಿನ ಹಾಗೂ ಮುಂದಿನ ಪೀಳಿಗೆಗೆ ಇವೆಲ್ಲದೆಯೂ ಬದುಕಬಹುದು ಎನ್ನುವ ಕಲ್ಪನೆಯೂ ಕಷ್ಟ.

ಆದರೆ ದಿನದಲ್ಲಿ ಮೂರು ಹೊತ್ತು ಊಟ ಮಾಡುತ್ತೇವೆ, ಮನೆಯೆಂಬ ಜಾಗವೊಂದು ನಮ್ಮ ವಾಸಸ್ಥಾನವೆಂದರಿಯದೆ ಆ ಕುಟುಂಬ ಹೇಗೆ ಬದುಕುತ್ತಿದೆ ಒಂದೇ ಸೂರ್ಯನಡಿಯಲ್ಲಿ? ಅವರಿಗೆ ಹೇಗೆ ಸಾಧ್ಯವಿದು???

ಒಮ್ಮೆ ಇದನ್ನೆಲ್ಲಾ ಸಮಯ ಸಿಕ್ಕಾಗ ಖಂಡಿತ ಯೋಚಿಸಿ, ಈ ಅನವಶ್ಯಕ ಬದಲಾವಣೆಯಿಂದ ನಮಗಾಗುವಷ್ಟು ಬದಲಾಗೋಣ. ವ್ಯರ್ಥವಾಗಿ ಪ್ರಕೃತಿಯ ಸಂಪನ್ಮೂಲಗಳನ್ನು ನಮ್ಮಿಂದ ಹಾಳಾಗದಂತೆ ನೋಡೋಣ, ಇದು ಆ ಬಡ ಕುಟುಂಬದ ಒಂದು ಮಗುವಿಗಾದರೂ ಒಂದು ಹೊತ್ತಿನ ಊಟಕ್ಕೆ ಎಟುಕಬಹುದು. ಇದಕ್ಕಿಂತ ಮುಂಚೆ, ಅವರಿಂದ ನಾವು ಕಳೆದುಕೊಂಡದ್ದನ್ನು ನೋಡಿ ಕಲಿಯೋಣ....ಅವರಿಗೆ ಸಾಧ್ಯವಾದದ್ದು ಕುಟುಂಬದ ಒಗ್ಗಟ್ಟು ಎಲ್ಲಾ ಇರುವ ನಮಗೇಕಾಗದು??

10 comments:

Prashanth said...

ಸುಮನ, ಅದ್ಭುತ ಚಿಂತನೆ! ಬದುಕನ್ನು ಒಂದು ಬದುಕಾಗಿ ಬದುಕುವ ಹಂಬಲವು ನಿಮ್ಮ ಬರಹದಲ್ಲಿ ಕಾಣುತ್ತಿದೆ. ಇದು ನಿಜವಾಗಿಯೂ ಅತ್ಯಂತ ಅವಶ್ಯ ಹಾಗೂ ಸ್ವಾಗತಾರ್ಹ :o)

ನಮ್ಮ ಜೀವನವನ್ನು ಇಂಥದ್ದೇ ತರ್ಕದಲ್ಲಿ ಅರ್ಥೈಸುವ ನನ್ನದೊಂದು ಬರವಣಿಗೆ ಇಲ್ಲಿದೆ http://pacchiee.blogspot.com/2010/08/blog-post_20.html - ಸಮಯ ಸಿಕ್ಕಾಗ ಓದಿರಿ.

Sumana said...

ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದ. ರಾತ್ರಿ ಪೋಸ್ಟ್ ಮಾಡಿದ ಬ್ಲಾಗ್ ಗೆ ಬೆಳಗ್ಗೆ ಬಂದು ನೋಡಿದಾಗ ಯಾರೋ ನನ್ನೀ ಮನನದಲ್ಲಿ ಪಾಲ್ಗೊಂಡಿರುವುದನ್ನು ನೋಡಿದರೆ ಖುಷಿಯೆನಿಸುತ್ತದೆ.

ನಿಮ್ಮ ಬರವಣಿಗೆಯನ್ನು ನಮ್ಮೊಟ್ಟಿಗೆ ಹಂಚಿಕೊಂಡದ್ದಕ್ಕೆ ಸಂತೋಷ. ನಿಮ್ಮ ಬರಹದಲ್ಲಿ ಭಾಷೆಯ ಬಳಕೆ ಅದರಲ್ಲಡಗಿರುವ ಚಿಂತನೆ ಇಷ್ಟವಾಯಿತು.

Prashanth said...

"ಇರುವುದೆಲ್ಲವ ಬಿಟ್ಟು, ಇಲ್ಲದುದರೆಡೆಗೆ ತುಡಿವುದೇ ಜೀವನ" ಕವಿಯ ಮಾತು ಅಕ್ಷರಸಹಃ ಸತ್ಯವಲ್ಲವೇ ಸುಮನ?

Sumana said...

ನಿಜ! "ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ..", ನಾನು ಹೆಚ್ಚಾಗಿ ಇಷ್ಟ ಪಡುವ ಸಾಲುಗಳಲ್ಲಿ ಅಡಿಗರ ಈ ಸಾಲು ಮೊದಲು...."ಕಾಣದಾ ಕಡಲಿಗೆ ಹಂಬಲಿಸುವ" ಈ ಮನವನ್ನು ಅರಿಯುವುದು ಬಹಳ ಕಷ್ಟ ಆದರೆ ಅಸಾಧ್ಯವಲ್ಲ!!!

Prashanth said...

ಮನಸ್ಸಿನ ಬಗೆಗೆ ನೀವು ಹೇಳಿರುವ ಮಾತುಗಳು ನಿಮ್ಮ ಆತ್ಮಸ್ಥೈರ್ಯವನ್ನು ಬಿಂಬಿಸುತ್ತವೆ. ಜೀವನದಲ್ಲಿ "ಪೂರಕ ಚಿಂತನೆ" ಬಹಳ ಅವಶ್ಯಕ, ಅದು ನಿಮ್ಮಲ್ಲಿರುವುದು ಇಲ್ಲಿ ವ್ಯಕ್ತವಾಗುತ್ತದೆ :o)

Ashwini said...

Super summis, positive thinking at its best. Such incidents speaks louder and clear than writing philosophy (I am talking about Shiv Khera). Incidents, though looks simple, there is lot in its hidden meanings. I dont know, but I think u can use more simple words, which a school boy can understand. I am not telling that it is complex to digest, but more simple words (no matter how lengthy it is) makes good reading. That was the first lesson I learnt in journalism :)

ಮನಮುಕ್ತಾ said...

ತು೦ಬಾ ಸು೦ದರ ಯೋಚನೆ...
ಪ್ರತಿಯೊಬ್ಬರು ಯೋಚಿಸಬೇಕಾದ ವಿಚಾರ..

ಜೀವನದಲ್ಲಿ ಯಾವುದೇ ದಾರಿಯಾದರೂ ಒ೦ದಷ್ಟು ಒಳ್ಳೆಯದು ಒ೦ದಷ್ಟು ಒಗ್ಗದ ಅನುಭವ ಕೊಡುತ್ತದೆ.ಪ್ರತಿಯೊಬ್ಬರೂ ನಾವಿರುವ ಜಾಗದಲ್ಲಿ ಬೇರೆಯವರಿಗೆ ತೊ೦ದರೆಯಾಗದ೦ತೆ, ಸಾದ್ಯವಾದಷ್ಟೂ ಬೇರೆಯವರ ಕಷ್ಟಗಳಿಗೆ ಸ್ಪ೦ದಿಸುತ್ತಾ ಇದ್ದಲ್ಲಿ ಜೀವನ ಸರಾಗವಾಗುತ್ತದೆ..ಎ೦ದು ನನಗನ್ನಿಸುತ್ತದೆ.
ಇನ್ನಷ್ಟು ಉತ್ತಮ ಚಿ೦ತನೆಗಳು ಬರಹ ರೂಪದಲ್ಲಿ ಬರುತ್ತಿರಲಿ.

Sumana said...

ನನ್ನ paintings ಗಳಿಗೆಂದು ಪ್ರಾರಂಭಿಸಬೇಕೆಂದುಕೊಂಡ ಬ್ಲಾಗ್ ನಲ್ಲಿ ಅವುಗಳ ಜೊತೆ ಕೆಲವರೊಂದಿಗಾದರೂ ನನ್ನ ಮನನಗಳನ್ನು ಹಂಚುವ ಪ್ರಯತ್ನವೆನಿಸಿತು. ಆದ್ದರಿಂದ paintings ಗಳ ಜೊತೆ ನನ್ನೀ ಆಲೋಚನೆಗಳನ್ನು ಕೂಡಿಸಿರುವೆ.
ಧನ್ಯವಾದ ನಿಮ್ಮ ಪ್ರೋತ್ಸಾಹಕ್ಕೆ. :)

Sai Alekhya said...

ur thinking is marvellous yaar.good keep it up

Flatfooter said...

ಚೆನ್ನಾಗಿದೆ..Needs vs Wants arguments ಇದ್ದೇ ಇದೆ. ಆದ್ರೆ ಜಯನಗರದ episode ಅದನ್ನ ಚೆನ್ನಾಗಿ ತ್ಹೊರ್ಸುತ್ತೆ