Today's Quote...

"Brightness is sun's nature, coolness is
water's nature, heat fire's nature. Similarly the
nature of Atma is Sath (Absolute Existence),
Chith (Absolute Knowledge) Ananda
(Absolute Bliss), Permanence and Purity." - Atmabodha, Aadi Sankaracharya.

Sunday, October 16, 2011

ಭದ್ರೆಯ ಹೊಳೆಯಲಿ....


ಈ ಅಂಕಣದಲ್ಲಿ ನಾನು ಬರೆದ ಚಿತ್ರವಲ್ಲ... ನನ್ನ ಪ್ರವಾಸ ಅನುಭವದ ಚಿತ್ರಣವಿದೆ.

ಕೊಡಗು, ಅಬ್ಬೆ ಜಲಪಾತ, ಮಡಿಕೇರಿ ಹೀಗೆ ಎಲ್ಲಾ ಜಾಗಗಳ ಪಟ್ಟಿಯಲ್ಲಿ ಕೊನೆಗೆ ನಮ್ಮ ಪ್ರಯಾಣ ನಿರ್ಧಾರವಾಗಿದ್ದು ’ಭದ್ರೆ’ಯ ಕಡೆಗೆ...

ಹೊರಡುವಾಗ ಸುಮಾರು ಒಂದು ಗಂಟೆ ತಡವಾದ ನಮ್ಮ ಪ್ರಯಾಣ, ಕೆಲವೊಂದು ನಿರ್ಧಾರಗಳಿಂದ ಪ್ರಾರಂಭವಾಯಿತು. ಮುಂದೆ ನಮ್ಮ ಪ್ರವಾಸದ ಪ್ರಾರಂಭ, ಹೊತ್ತು ಮಾಡಿದವರ ಮನೆಯಿಂದ ಎಂದು! ಸೂರ್ಯ ಎದ್ದೇಳುವ ಮುನ್ನ ಹೊರಡಲಾಗದಿದ್ದರೂ...ಸೂರ್ಯನಿಗೆ ಬೆಂಗಳೂರಿನಲ್ಲೇ ’ಹಾಯ್’ ಹೇಳಿತು ನಮ್ಮ ೧೨ ಜನರ ಗುಂಪು. ಇದರಲ್ಲಿ ಇಬ್ಬರು ಚಿಕ್ಕ ಹುಡುಗರು...

ಹಾಸನದ ಹೆದ್ದಾರಿಯಲ್ಲಿರುವ ಮಯೂರ ಹೋಟೆಲ್ ಬರುವಷ್ಟರಲ್ಲಿ ’ಹುಡುಗರು’ ಚಿತ್ರದಿಂದ ನಾವು ಜಗಳೂರು ತಲುಪಿದ್ದೆವು! ಸಾಗು ಬರುವಷ್ಟರಲ್ಲಿ ಪೂರಿಯನ್ನು ಮುಗಿಸಿ, ಕರಿಯಾದ ಮಸಾಲ ದೋಸೆಯನ್ನೂ, ಸಿಹಿ ಇಲ್ಲದ ಕೇಸರಿ ಬಾತನ್ನೇ ಪರಮಾನ್ನವೆಂದುಕೊಂಡೆವು.

’ಹುಡುಗರು’ ಚಿತ್ರ ಬೇಡವೆಂದೆನೆಸಿ, ಕೆಲವೊಬ್ಬರ ಕೋರಿಕೆಯ ಮೇರೆಗೆ ’ಸಂಜು ಮತ್ತು ಗೀತ’ ಪ್ರಾರಂಭಿಸಿದರು. ಬರೀ ಚಲನಚಿತ್ರ ನೋಡುತ್ತಿದ್ದೆವು ಎಂದುಕೊಳ್ಳಬೇಡಿ, ಕಚೇರಿಯ ಹಾಸ್ಯಗಳು, ಹೊಸ ನಾಮಕರಣಗಳು ಇವೆಲ್ಲಾ ನಮ್ಮ ಗುಂಪುನಲ್ಲಿ ಮಾಮೂಲು...ಆದರೆ ಸ್ವಲ್ಪ ತಪ್ಪಾಗಿದ್ದೆ ಈ ಚಿತ್ರದ ಆಯ್ಕೆ.

ನಮ್ಮ ಪ್ರಯಾಣ ಎಲ್ಲಿಗೆ ಎಂತಲೇ ನಾನು ಸರಿಯಾಗಿ ಹೇಳಲಿಲ್ಲ ಅಲ್ವಾ!!!... , ನಾವು ಭದ್ರ ನದಿಯ ಬಳಿಯಿರುವ ಕ್ಯಾಂಪ್ ಗೆ ಮುಂಗಡವಾಗಿ ಕಾದಿರಿಸಿದ್ದೆವು. ಬೆಂಗಳೂರಿನಿಂದ ೨೮೫ ಕಿ.ಮೀ... ಚಿಕ್ಕಮಗಳೂರು, ಶೃಂಗೇರಿ ಕಡೆಗೆ... ಮಧ್ಯಾಹ್ನವಾಗುತ್ತಿದ್ದರಿಂದ ಊಟದ ವ್ಯವಸ್ಥೆಯನ್ನು ಫೋನ್ ನಲ್ಲಿ ವಿಚಾರಿಸಿ ಅಂತೂ ನಮ್ಮ ಗುರಿಯನ್ನು ತಲುಪಿದೆವು. ಮಧ್ಯದಲ್ಲಿ ಮುಂದಿನ ಪ್ರವಾಸದ ಬಗ್ಗೆ ನಮ್ಮ ಹರಟೆ ಸಾಗಿತ್ತು. ತಲುಪುತ್ತಿದ್ದಂತೆ ನಮಗೆ ಒಳ್ಳೆಯ ಉಪಚಾರ ಕ್ಯಾಂಪ್ ನವರಿಂದ. ಮೂರು ಟೆಂಟ್ ಗಳನ್ನು ಆಕ್ರಮಿಸಿ, ಊಟದ ನಂತರ ನೀರಿಗೆ ಇಳಿಯಲು ಸಿದ್ದವಾದೆವು.

ಅದೊಂದು ಸುಂದರ ತಾಣ, ದೂರದಲ್ಲಿ ಸುತ್ತಲೂ ಬೆಟ್ಟಗಳ ದೃಶ್ಯದೊಂದಿಗೆ ಕೆಳಗೆ ಭದ್ರ ನದಿಯ ಓಟ ತನ್ನತ್ತ ಸಳೆಯುವಂತಹುದು. ನೀರು ತುಂಬಾ ಹೆಚ್ಚಾಗಿರದಿದ್ದರೂ ನಾವು ಸಮಯ ಕಳೆಯಲು ಸರಿಯಾಗಿತ್ತು. ೩ ಗಂಟೆಯ ಸಮಯವೆನಿಸುತ್ತದೆ, ಎಲ್ಲಾ Life jacket ಧರಿಸಿ ತಣ್ಣಗೆ ಕೊರೆಯುತ್ತಿದ್ದ ನೀರಿಗೆ ನಿಧಾನವಾಗಿ ಇಳಿದೆವು. ನೀರಿನಲ್ಲಿ ಆಡುವುದೆಂದರೆ ಎಂಥವರಿಗಾದರೂ ಇಷ್ಟ... ಎಲ್ಲಾ ಚಿಕ್ಕವರಾಗುತ್ತೇವೆ ಎನ್ನುವುದಕ್ಕೆ ನಾವೇ ಉದಾಹರಣೆಯಾಗಿದ್ದೆವು. ಚಿಕ್ಕಂದಿನಲ್ಲಿ ಕೊನೆಯ ವಾರ್ಷಿಕ ಪರೀಕ್ಷೆಯನ್ನು ಈಗಷ್ಟೆ ಮುಗಿಸಿ, ಸ್ನೇಹಿತರೊಂದಿಗೆ ಆಡಿದಷ್ಟು ಸಂತೋಷವಿತ್ತು.

ನಮ್ಮ ಅದೃಷ್ಟದಂತೆ ನೀರಿನಲ್ಲಿ ಆಡುತ್ತಿದ್ದಾಗ, ಮೋಡಗಳೂ ನಮ್ಮೊಂದಿಗೆ ಆಡಲು ಬರುವಂತೆ ಮಳೆಗರೆಯಿತು. ಆಹಾ..ಇದಕ್ಕಿಂತ ಮತ್ತೇನು ಬೇಕು ಪ್ರಕೃತಿಯನ್ನು ಸವಿಯಲು. ನೀರಿಗೆ ಇಳಿಯಲು ನಡುಗಿದ ನಾವು ಈಗ ಆಚೆ ಬರಲು ನಡುಗಿದೆವು... ಅಲ್ಲಿದ್ದ ಕ್ಯಾಂಪ್ ವ್ಯವಸ್ಥೆಯನ್ನು ಮೆಚ್ಚಬೇಕು, ಅವರು ನಮಗೆಲ್ಲಾ ಬಿಸಿ ನೀರನ್ನು ಒದಗಿಸಿದರು.

ಸ್ನಾನ, ಟೀ ಎಲ್ಲಾ ಮುಗಿಸಿ ಪಕ್ಕದಲ್ಲಿ ಹುಲ್ಲಿನ ಮೈದಾನದಲ್ಲಿ ಕಟ್ಟಿದ್ದ ನೆಟ್ ನಲ್ಲಿ shuttle badminton  ಆಡಿದೆವು. ಪಕ್ಕದಲ್ಲಿದ್ದ ಹೊಲವನ್ನು ನೋಡಿದರೆ, ನನಗೆ ನಮ್ಮ office ಇಲ್ಲಿದ್ದಿದ್ದರೆ ಎಂದೆನಿಸಿತು.
ಅಲ್ಲೇ ನಮ್ಮ ಸ್ನೇಹಿತೆಗೆ ಜಿಗಣೆ ಕಚ್ಚಿ, ರಕ್ತ ಬರುತ್ತಿರುವುದು ಕಾಣಿಸಿದಾಗಲೇ ನನಗೆ ಮೊದಲ ಸಲ ಜಿಗಣೆಯ ಪರಿಚಯವಾಯಿತು. ಮತ್ತೆ ಎಲ್ಲರಿಗೂ ಕಾಲುಗಳನ್ನು ನೋಡಿಕೊಳ್ಳುವುದೇ ಆಯ್ತು. ಸೂರ್ಯಾಸ್ತವಾಗುತ್ತಿದ್ದಂತೆ camp fire ಗಾಗಿ ಸುತ್ತ ಕೂತ ನಾವು ಒಂದು ಸಣ್ಣ ಆಟದೊಂದಿಗೆ ಎಲ್ಲರಿಂದ ಒಂದೊಂದು ಕಾರ್ಯಕ್ರಮವನ್ನು ನಡೆಸಿ, ’ಹುಡುಗರು’ ಚಿತ್ರದ ’ನಾ ಬೋರ್ಡು ಇರದ ಬಸ್ಸನ್ನು...ಪಂಕಜ’ ಹಾಡಿಗೆ ಹೆಜ್ಜೆಹಾಕಿದ್ದಾಯ್ತು. ಆ ಸ್ಥಳ ಎಂಥವರನ್ನು ಭದ್ರೆಯ ಮಡಿಲಲ್ಲಿ ಚಿಕ್ಕ ಮಕ್ಕಳಂತಾಗಿಸುತ್ತದೆ!!! 
ಹೊಟ್ಟೆ ಹಸಿವಿಗಾಗಿ ಬಿಸಿ ಬಿಸಿ ಊಟ ತಯಾರಿತ್ತು...ಆಡಲು ನಮ್ಮ Engineering ಕಾಲೇಜ್ ನ ಮಾತುಗಳು. ತಿಂದು ಮತ್ತೆ camp fire ನ ಬಳಿ ಸ್ವಲ್ಪ ಹೊತ್ತು ಕೂತೆವು, ನನ್ನ ಸ್ನೇಹಿತರಿಗೆ.. ’ಕನಸ ಮಾರುವ ಚೆಲುವ ಹಾಡ ನಿಲ್ಲಿಸ ಬೇಡ’ ಎಂದೆನಿಸಿದರೆ, ನನಗೆ ’ಅಮ್ಮಾ, ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು...’ ಎಂದೆನಿಸಿತು. ಈ ಎರಡು ಹಾಡುಗಳೊಂದಿಗೆ ನಮ್ಮ ಸ್ವಲ್ಪ ಸಮಯ ಹಾಡಿನಲ್ಲಿ ಕಳೆದೆವು. ದಿನನಿತ್ಯದ ಕೆಲಸಗಳ ಪಟ್ಟಿಯನ್ನು ತಲೆಯಿಂದ ಕಿತ್ತೊಗೆದು, ಮೊಬೈಲ್, ಟಿವಿ, ಸಮಯದ ಜೊತೆ ಓಡುವುದರಿಂದ ವಿಶ್ರಾಂತಿ ಸಿಕ್ಕ ನಮ್ಮೆಲ್ಲರ ಮನಸ್ಸು ಪ್ರಶಾಂತವಾಗಿತ್ತು ಆ ಕತ್ತಲಲ್ಲಿ.


ಬೆಳಗಿನಿಂದ ಒಂದೇ ಸಮನೆ ಹರಟೆ, ಪ್ರಯಾಣ, ಚಿಕ್ಕ ಮಕ್ಕಳಂತೆ ನೀರಿನಲ್ಲಿ ಆಡಿ ದಣಿವಾಗಿದ್ದ ನಮ್ಮೆಲ್ಲರಿಗೂ ಟೆಂಟ್ ನಲ್ಲಿ ಮಲಗ್ಗಿದ್ದು ತುಂಬಾ ಒಳ್ಳೆಯ ನಿದ್ದೆ ತಂದಿತು. ಬೆಳಿಗ್ಗೆ, ಕಾಡಿನ ಕಡೆ ಪ್ರಯಾಣ....



ಎದ್ದು ನಾವು ಕಾಡಿಗೆ ’ಸಿದ್ದ’ವಾಗುತ್ತಿದ್ದಂತೆ ಅಲ್ಲಿಯವರು ಟೀ, ಕಾಫಿ ಮಾಡಿಟ್ಟರು. ಅಲ್ಲಿದ್ದ ವ್ಯವಸ್ಥಾಪಕರಲ್ಲಿ ಇಬ್ಬರು ನಮ್ಮನ್ನು ಕಾಡಿನತ್ತ ಕರೆದುಕೊಂಡು ಹೋದರು. ಕಾಲ್ನಡಿಗೆಯಲ್ಲಿ ಸಾಲಾಗಿ ಹೋಗುವುದು, ಅಲ್ಲಿದ್ದ ಜಿಗಣೆಗಳಿಂದ ತಪ್ಪಿಸಿಕೊಳ್ಳುವುದು ಹೊಸ ಅನುಭವ. ನದಿಯ ಒಂದು ದಡದಲ್ಲಿ ಹಿಂದಿನ ದಿನ ಆಡಿದ್ದ ನಾವು, ಈಗ ಮತ್ತೊಂದು ದಡದಲ್ಲಿ ಇದ್ದೆವು. ಆದರೆ ಇದು ಆಟವಾಡಲು ಆಳ ಹೆಚ್ಚಾದ್ದರಿಂದ, ಬಂಡೆಗಳ ಮೇಲೆ ಎಲ್ಲರ photo session  ಪ್ರಾರಂಭವಾಯ್ತು. ಪ್ರತಿಯೊಬ್ಬರಿಗೂ ಈ ಫೋಟೊಗಳು Facebook ಗಾಗಿ!!! ನವ ವಿವಾಹಿತರಾಗಿದ್ದ ಒಂದು ಜೋಡಿಗೆ ಇದು ಅವರ ಹೊಸ albums ಗೆ  ತಮ್ಮ ಜೋಡಿ ಚಿತ್ರಗಳು...ಮದುವೆಯಾಗದವರಿಗೆ ’ಮಗಧೀರ’ನಿಗಾಗಿ ಬಂಡೆಯ ಮೇಲೆ ಕಾದು ಕೂತ ಚಿತ್ರಗಳು, ಕುಟುಂಬದೊಂದಿಗೆ ಬಂದವರಿಗೆ ಇದೊಂದು perfect photo! ಮತ್ತೆ ಕೆಲವರಿಗೆ ಕಾಲ ಕಳೆಯಲು, ಮರೆಯಲಾಗದ ಕ್ಷಣಗಳನು ಮೆಲುಕು ಹಾಕಲು.


ದೂರ ಕಾಡಿನಲ್ಲಿ ಎಲ್ಲೋ ಕಳೆದು ಹೋಗುತ್ತಿದ್ದ ನಮಗೆ ಜಿಗಣೆಗಳದೇ ಯೋಚನೆ. ನೋಡಿಯೂ ನೋಡದಂತೆ ಸಾಗುತ್ತಿದ್ದ ನನಗೆ ಯಾರೋ ನನ್ನ ಪಾದಗಳಲ್ಲಿ ಹತ್ತುತ್ತಿರುವುದನ್ನು ತೋರಿಸಿದಾಗ ಪ್ರಾರಂಭವಾಯ್ತು ಜಿಗಣೆ dance. ಕೊನೆಗೆ ಎಲ್ಲಾ ಸಾಕೆಂದು ವಾಪಸ್ಸಾದಾಗ ಮತ್ತೆ ಒಂದು ಚಿಕ್ಕ beach ನಂತಿದ್ದ ದಡದಲ್ಲಿ ಜಿಗಣೆಗಳಿಗಾಗಿ ನಮ್ಮೆಲ್ಲಾ ಶೂ, ಚಪ್ಪಲಿಗಳನ್ನು ಶೋಧಿಸಿದೆವು. ಮರಳಲ್ಲಿ ನಮ್ಮ ಹೆಸರುಗಳನ್ನು ಕೆತ್ತಿ, ಮರಳುಗಪ್ಪೆಯನ್ನು ನಮ್ಮ ಕ್ಯಾಮೆರಾದಲ್ಲಿ ಹಿಡಿದು, ಮರಳಲ್ಲಿ ಮನೆ ಕಟ್ಟಿ...ಹೊರಟೆವು. ನನಗಂತೂ ತುಂಬಾ ಚಿಕ್ಕ ಚಾರಣ ಪ್ರಯತ್ನವಾದರೂ ಸ್ನೇಹಿತರೊಂದಿಗೆ ಕಳೆದ ಪ್ರತಿಯೊಂದು ಫಳಿಗೆಯೂ ನೆನಪಿನಲ್ಲಿ ಅಚ್ಚ ಹಸಿರಾಗಿರುತ್ತದೆ.



 ನಮಗಾಗಿ ಕಾದಿದ್ದ ಇಡ್ಲಿ, ಸಾಂಬಾರ್, ವಡೆಯಿಂದ ಹೊಟ್ಟೆ ತುಂಬಿಸಿ, ಗನ್ ಹಿಡಿದು ದೂರದಲ್ಲಿದ್ದ ಬಾಟಲ್ ಗೆ ೩ ಪ್ರಯತ್ರದಲ್ಲಿ ಹೊಡೆಯುವ ಅನುಭವವೂ ಸಿಕ್ಕಿತು. ಮತ್ತೆ ಭದ್ರೆಗೆ ಇಳಿದೆವು... ಗಂಟೆ ೧೧ ಆಗಿದ್ದರಿಂದ, ಬಿಸಿಲಲ್ಲೇ ತಣ್ಣೀರಿನಾಟ... ಅಲ್ಲಿದ್ದವರು ನನ್ನಂಥವರನ್ನು ನೀರಿನಲ್ಲಿ ತೇಲಿಸಿದರು... ನೀರಿನಲ್ಲಿ Life jacket ಇದ್ದರೂ ಹೆದರುತ್ತಿದ್ದ ನನಗೆ ಮುಂಗಾರು ಮಳೆಯಲ್ಲಿ ಗಣೇಶ್ ಮಲಗಿದ ಹಾಗೆ ಮಲಗಿ ತೇಲಿದ್ದು ಆಕಾಶದಡಿ ಕಣ್ಣು ಮುಚ್ಚಿ ಕನಸು ಕಂಡಂತಿತ್ತು... ಅದೊಂದು ಮತ್ತೆ ಮತ್ತೆ ಆ ಸ್ಥಳಕ್ಕೆ
ಹೋಗಬೇಕೆನೆಸುವ ಅನುಭವ.
ಮತ್ತೆ ಎಲ್ಲರೂ ಬೆಂಗಳೂರಿಗೆ ಸಿದ್ದವಾದೆವು. ೩೦ ಕಿ.ಮೀ ದೂರದಲ್ಲಿದ್ದ ಶೃಂಗೇರಿ ಶಾರದೆಗೂ, ಹೊರನಾಡಿನ ಅನ್ನಪೂರ್ಣೇಶ್ವರಿಗೂ ದೂರದಿಂದಲೇ ನಮಿಸಿ ಹೊರಟೆವು.. ಅಲ್ಲಿಂದ ಬೆಂಗಳೂರಿಗೆ ಬರಲು ಯಾರಿಗೂ ಇಷ್ಟವಿರಲಿಲ್ಲ....ಆದರೂ ಮುಂದಿನ ಪ್ರಯಾಣಕ್ಕಾದರೂ ದುಡಿಯಬೇಕಲ್ಲ..!

ಇದೇ ಸುಂದರ ಪ್ರಕೃತಿಯ ಮಡಿಲಲ್ಲಿ ನಾವು ಕಳೆದ ಚಿತ್ರಣ... ಇಷ್ಟವಾದರೆ ನೀವೂ ಇದನ್ನ ನೋಡಿ ನಮ್ಮಂತೆಯೇ ನಿಮ್ಮ ದಿನನಿತ್ಯದ ಕೆಲಸದಿಂದ ಹೊರಹೋಗಿ. ಜೀವನ ಒಮ್ಮೆಯಷ್ಟೆ ಸಿಗುವುದು ಇದನ್ನೆಲ್ಲ ಕಂಡು ಆನಂದಿಸಲು....


6 comments:

Sandeep said...

Blog tumba chennagide. . . .

Arvi said...

Chennagi mudi bandidhe nimma blog. adare as usual nanna feed back :) prakara, baravanige madhydalli avasaravaagi muktaya kandidhe, hagu swalapa dhedeer antha topic change agide..
edhu nanna anisike aste :)

matte, trip bagge helodu enide.. adhu ondhu vismyatitavaada prayana.. nanu expect madirde astu sogasagi ettu :)

haagu, Dhanyavagalu tamage hagu tamma lekhani i mean key board ge :)

Sumana said...

ನಿಮ್ಮ feedback ಗೆ ಧನ್ಯವಾದಗಳು...

ಬರೆಯಲು ತುಂಬಾ ಇತ್ತು ಆದರೆ ಅದೆಲ್ಲ ನಮ್ಮವರಿಗೆ (ನಮ್ಮ ಗುಂಪಿಗೆ) ಮಾತ್ರ ಅರ್ಥವಾಗುವುದು...ನನ್ನ blog ಅನ್ನು ಬೇರೆಯವರೂ ಓದುವುದರಿಂದ ಅದನ್ನೆಲ್ಲಾ ಬದಿಗಿಟ್ಟೆ...
ಹಾಗು ಸಮಯದ ಅಭಾವದಿಂದ ನಾನು ನನ್ನ ನೆನಪಿನಲ್ಲಿರುವ ಎಲ್ಲ ವಿಷಗಳನ್ನು ಮರೆಯುವ ಮುನ್ನ, ನನ್ನ ಎಲ್ಲಾ ಸ್ನೇಹಿತರೊಂದಿಗೆ ಈ ಅನುಭವವನ್ನು ಹಂಚಲು ಆತುರಳಗಿದ್ದೆ.. :)

ನೀವು ನಿರೀಕ್ಷಿಸಿದ್ದ ಕೆಲವು ವಿಷಯಗಳನ್ನು ನಮ್ಮ ಜೊತೆ ಹಂಚಿಕೊಳ್ಳಬಹುದು...ಮತ್ತೊಮ್ಮೆ ನಿಮ್ಮ ನಿಜವಾದ ಅನಿಸಿಕೆಗೆ ಧನ್ಯವಾದ...

Prashanth said...

ಅಚ್ಚುಕಟ್ಟಾಗಿ ವರ್ಣಿಸಿದ್ದೀರಿ ಸುಮನ. ಓದಿ ಬಹಳ ಖುಷಿ ಅನಿಸಿತು. ನಾನೂ ಒಮ್ಮೆ ಅಲ್ಲಿ ಹೋಗಿ ಬರುವ ಆಸೆ ಮೂಡಿದೆ ಮನದಲ್ಲಿ. ಸಾಧ್ಯವಾಗುತ್ತದೋ ನೋಡೋಣ.. :o)

ಮುಂಬರುವ ಕನ್ನಡ ರಾಜ್ಯೋತ್ಸವದ ಅಂಗವಾಗಿ 'ಕಹಳೆ' (www.kahale.gen.in) ಎಂಬ ನಮಾಂಕಿತದಲ್ಲಿ ಒಂದು ಪುಟ್ಟ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ನೀವೂ ಸಹ ದಯವಿಟ್ಟು ಭಾಗವಹಿಸಿ, ನಿಮ್ಮ ಸ್ನೇಹಿತರನ್ನೂ ಭಾಗವಹಿಸಲು ಪ್ರೇರೇಪಿಸಿ. ದಯಮಾಡಿ ಕಹಳೆಗೆ ನಿಮ್ಮದೊಂದು ಕನ್ನಡ ಭಾಷೆಯಲ್ಲಿ ಬರೆದ ಲೇಖನವನ್ನು ಕಳುಹಿಸಿಕೊಡಿ. ನಮ್ಮ ಕೋರಿಕೆಗೆ ಸ್ಪಂದಿಸುತ್ತಿರೆಂದು ನಂಬಿದ್ದೇವೆ. ಹೆಚ್ಚಿನ ಮಾಹಿತಿಗಾಗಿ www.kahale.gen.in ಗೆ ಭೇಟಿಕೊಡಿ.

Badarinath Palavalli said...

ತುಂಬಾ ಚೆನ್ನಾಗಿ ಬರೆದಿದ್ದೀರ ಸುಮನ. ಒಳ್ಳೆ ಫೋಟೋಗಳೂ ಖುಷಿ ಕೊಟ್ಟವು. ನಮಗೂ ಇಂತಹ ಪ್ರವಾಸಗಳಿಗೆ ಹೋಗಿ ಬರುವ ಅವಕಾಶ ಯಾವಾಗ ಸಿಗುವುದೋ ಎನ್ನುವಂತೆ ಹೊಟ್ಟೆ ಉರಿ ಬಂತು!

ಬಿಡುವು ಮಾಡಿಕೊಂಡು ನನ್ನ ಬ್ಲಾಗುಗಳಿಗೂ ಬನ್ನಿರಿ:
www.badari-poems.blogspot.com
www.badari-notes.blogspot.com
www.badaripoems.wordpress.com

Face book Profile : Badarinath Palavalli

ನಿಮ್ಮ ಓದಿಗೆ ನನ್ನ ಕವನಗಳು ಕಾದಿವೆ ಮತ್ತು ನಿಮ್ಮ ಅಭಿಪ್ರಾಯದ ಕಾಮೆಂಟುಗಳು ನನಗೆ ದಾರಿ ದೀಪ.

Sumana said...

ನಿಮ್ಮ ಅನಿಸಿಕೆಗಳಿಗೆ ಧನ್ಯವಾದ..
ಪ್ರಶಾಂತ್, ನಿಮ್ಮ ಆಮಂತ್ರಣ ನನಗೊಂದು ಪ್ರೋತ್ಸಾಹ..