Today's Quote...

"Brightness is sun's nature, coolness is
water's nature, heat fire's nature. Similarly the
nature of Atma is Sath (Absolute Existence),
Chith (Absolute Knowledge) Ananda
(Absolute Bliss), Permanence and Purity." - Atmabodha, Aadi Sankaracharya.

Thursday, September 30, 2010

ಎಲ್ಲಿ ಕಳೆಯಿತು ಸಮಯ...


"ಡಾಕ್ಟ್ರೇ, ಮಗು ಹುಟ್ಟಿದ ಸಮಯ ಸರಿಯಾಗಿ ಗುರುತಿಸಿದ್ದೀರಾ? ಜಾತಕ ತಪ್ಪಾಗ ಬಾರದು...ಅದಕ್ಕೆ ಕೇಳಿದೆ" ಹೀಗೆ ಒಬ್ಬ ವ್ಯಕ್ತಿ ಮಾತಾಡಿದ್ದನ್ನು ಕೇಳಿ ನಗು ಬಂತು. ಅಷ್ಟು ಸರಿಯಾಗಿ ಸಮಯ ಗುರುತಿಸಿರುತ್ತಾರಾ? ನಮ್ಮ ಜಾತಕ ಒಂದೊಂದು ಕ್ಷಣದ ಮೇಲೆ ನಿಂತಿದೆ ಅಂದರೆ ನಮ್ಮ ಜಾತಕ ಖಂಡಿತ ನಮ್ಮದಲ್ಲವೇನೊ ಎಂದು. ಹೀಗೆ ಈ ಸಮಯದ ಕುರಿತು ಯೋಚಿಸುತ್ತಾ ಹೋದಾಗ ನನಗನ್ನಿಸಿದ್ದು, ’ಮಗು ಮಲಗುವ ಹೊತ್ತಾಯಿತು","ಏಳುವ ಹೊತ್ತಾಯಿತು","ಊಟದ ಹೊತ್ತಾಯಿತು"...ಓದುವಾಗ ಆಟಕ್ಕೆ ಸಮಯವಾಯಿತೆಂದು, ಆಡುವಾಗ ಓದುವ ಸಮಯವಾಯಿತೆಂದು ಯೋಚನೆ. ಕಾಲೇಜು ಮೆಟ್ಟಿಲು ಹತ್ತಿದಾಗ ಕೆಲಸ, ಮದುವೆ ಹೀಗೆ ಸಮಯ ಆಗಿಹೋಗುತ್ತಿದೆಯೆಂದು ನಮ್ಮನ್ನೇ ನಾವು ಗಡಿಯಾರದಂತೆ ಮಾಡಿಕೊಂಡು ಎಲ್ಲಿಗೆ ಓಡುತ್ತಿದ್ದೇವೆ?

ಹೋದವಾರ ಮೈಸೂರಿನ ಚಾಮುಂಡಿಪುರದ ಮಲ್ಲಿಗೆ ಸೇವಾ ಸಂಘದವರು ಆಯೋಜಿಸಿದ್ದ ಶ್ರೀ ಶಂಕರ್ ಶಾನುಭಾಗ್ ರವರ ಸಂಗೀತ ಕೇಳುತ್ತಿದ್ದಾಗ ಅವರ ಕೆಲವು ಮಾತುಗಳು ಸತ್ಯವೆನಿಸಿತು. ಅವರು ಹಾಡಿನೊಂದಿಗೆ ಕೆಲವು ಒಳ್ಳೆಯ ಹಿತವಚನಗಳನ್ನು ಹೇಳುತ್ತಿದ್ದರು. "ಬ್ಯಾಂಕಿನಲ್ಲಿ ನಾನು ೩೦ ವರುಷ ಸರ್ವೀಸ್ ಮಾಡಿದ್ದೇನೆ" ಅನ್ನುತ್ತಾರಲ್ಲ, ಅದೇನು ಸರ್ವೀಸ್ ರ್ರೀ? ಯಾರಿಗೆ ಸರ್ವ್ ಮಾಡಿದ್ದಾರೆ ಅವರು? ಅವರ ಹೆಂಡತಿ ಮಕ್ಕಳಿಗಾಗಿ ತಾನೆ...ಅದು ಅವರ ಕೆಲಸ ಮುಗಿಸಿಕೊಂಡು ಹೋಗುತ್ತಿದ್ದರು ಅಷ್ಟೆ ಯಾರಿಗಾದರು ಒಂದಷ್ಟು ಸಹಾಯ ಹಸ್ತ ಬೆಳೆಸಿದ್ದಾರ..ಏತಕ್ಕೆ ಅವರಿಗೆ ಸನ್ಮಾನ ಎಂದಾಗ ಹೌದೆನಿಸಿತು. ಜೀವನವಿಡಿ ಒಂದಷ್ಟು ಸ್ನೇಹಿತರನ್ನು ಮತ್ತಷ್ಟು ಶತ್ರುಗಳನ್ನು ಸಂಪಾದಿಸುತ್ತೇವೆ. ಈ ಯಾಂತ್ರಿಕ ಬದುಕಿನಲ್ಲಿ ನಮ್ಮವರೆಂದು ಹೇಳಿಕೊಳ್ಳುವುದಕ್ಕೆ ಇಲ್ಲದಿದ್ದರೂ ಆಶ್ಚರ್ಯವಿಲ್ಲ. (ಈಗಿನ ನಮ್ಮ ಪೀಳಿಗೆಯನ್ನು ನೋಡಿದರೆ ಎಲ್ಲೋ ಇಬ್ಬರೊ ಮೂವರು ಮಿತ್ರರಿದ್ದರು ಅವರು ಫೋನ್ ನಲ್ಲಿ...ಮತ್ತೆಲ್ಲ ಇಂಟರ್ನೆಟ್ ಮಿತ್ರರು..ಅವರಿಗೆ ನಾವು gmail/orkut/facebook/twitter/blog ಗಳಲ್ಲಿ ಕಾಣದಿದ್ದಾಗ "ಓ ಇವರೆಲ್ಲೋ ವಿಧಿವಶರಾದರು" ಎಂದು ತಿಳಿಯಬೇಕು ಅವರು ಅಷ್ಟೆ..!!! )

ಬಾಲ್ಯ, ಯೌವ್ವನ, ವೃದ್ದಾಪ್ಯ ಎಂದು ನಮ್ಮ ಜೀವನದಲ್ಲಿ ಕೆಲವು ಪರಿಮಿತಿಗಳನ್ನು ಹಾಕಿಕೊಂಡು ಯಾವುದಕ್ಕೊ ಅರ್ಥಕೊಡದೆ ಸಾರಹೀನ ಬದುಕ ಬಾಳಿ ಮಾಯವಾಗುತ್ತೇವೆ. "ಸ್ವಾಮಿ..ಯಾಕೆ ಈ ಮಾನವ ಜನ್ಮ ಎಲ್ಲಿಂದ ಬಂದೆ? ಯಾಕೆ ಬಂದೆ, ಹೇಗೂ ಹೋಗುತ್ತೇನೆ ಸುಮ್ಮನೆ ಯಾಕೆ ಇವೆಲ್ಲ ಹೋದ್ರಾಯ್ತು" ಎನ್ನುವವರಿಗೆ ಇದೆಲ್ಲದರಿಂದ ಓಡುವ ಮನೋಭಾವವಷ್ಟೆ. 
ಮತ್ತೆ ಕೆಲವರು, "ನನಗೆ ೩೦ ಅಷ್ಟೆ, ಇನ್ನು ಸಮಯವಿದೆ ಬಿಡಿ" ಎಂದು, ಯಾರದರೊಬ್ಬರನ್ನು ಪ್ರೀತಿಸಿ (?) ಮದುವೆ ಆಗಿ ನಂತರ ಸಮಯಕ್ಕೆ ತಕ್ಕಂತೆ ಬರುವ ಬದಲಾವಣೆಗಳನ್ನು ಸಹಿಸಲಾಗದೆ ಮದುವೆಯಾದವಳನ್ನು ಮನೆಯಿಂದ ದೂರವಿಟ್ಟು "ನನ್ನ ಸಮಯ ಸರಿಯಿಲ್ಲ" ಎಂದುಕೊಳ್ಳುತ್ತಾರೆ! ನಂತರ ಹೆಂಡತಿ ಬೇಕೆನಿಸಿ ಈಗಿರುವ ತುಂಬಾ ಸುಲಭ ಸಂಪರ್ಕ, ಮೊಬೈಲ್ ನಂಬರ್ ಇದೆಯಲ್ಲ ಎಂದು ೪೦ ಆದರೂ ಸಮಯ ತಳ್ಳುತ್ತಾರೆ, ಆದರೆ ಒಳ್ಳೆಯ ಬದಲಾವಣೆಗೆ ಧೈರ್ಯ ಬಾರದು. "ಬರುತ್ತಾಳೆ ಬಿಡು ಎಲ್ಲಿಗೆ ಹೋಗುತ್ತಾಳೆ" ಎನ್ನುವ ಧೈರ್ಯ ಅವರಿಗೆ. ತಮ್ಮ ಕನಸುಗಳೆಲ್ಲಾ ಕಗ್ಗತ್ತಲಲ್ಲಿ ಕರಗಿ ಹೋಗುತ್ತಿರುವುದು, ಸಮಯವೆತ್ತಲೋ ಪ್ರೀತಿಯ ನೆನಪಲ್ಲಿ ಉಳಿದುಹೋಗಿರುವುದು ಸಮಯಕ್ಕೆ ಸರಿಯಾಗಿ ತಿಳಿದಿದ್ದರೆ...ಅದಕ್ಕೆ ಅನಿಸುತ್ತೆ ದೇವರು ಮರೆವೆಂಬ ಔಷಧಿಯನ್ನು ಇಟ್ಟಿರೋದು :) ಒಡೆದ ಮನಸ್ಸುಗಳಿಗೆ ಸಮಯವು ಮರೆವೆಂಬ ಮದ್ದಿನಿಂದ ಪ್ರೀತಿಯನ್ನು ಮುಚ್ಚಿ ಹಾಕುತ್ತದೆ. ಇಬ್ಬರೂ ಮತ್ತೆ ಅದೇ ಪ್ರೀತಿ ಬೇಕೆಂದರೂ ದುರಭಿಮಾನಗಳ, ವಾದ ವಿವಾದಗಳ, ಅನುಮಾನಗಳ ಸುಳಿಯಲ್ಲಿ ಸಿಕ್ಕಿ ದಡವನೆಂದೂ ಸೇರರು.

ಜೀವನ ಆನಂದಭರಿತವಾಗಿದ್ದಾಗ ಒಂದರೆಕ್ಷಣ ನಮ್ಮೊಳಗಿನ ಆನಂದವನ್ನು ಮೆಲಕು ಹಾಕಲೂ ಸಮಯ ದೊರೆಯದು, ಆದರೆ ಯಾಂತ್ರಿಕ ಬದುಕಿನಲ್ಲಿ ಮುಳುಗಿ ಎಲ್ಲರಿಂದ ದೂರವಾದ ಮೇಲೆ ನಿಶ್ಶಬ್ದತೆ ಸದ್ದು ಕಾಲವನ್ನು ನಿಲ್ಲಿಸಿ ಚಿತ್ರಹಿಂಸೆ ಕೊಟ್ಟಂತಾಗುತ್ತದೆ.

ಒಮ್ಮೆ ಯೋಚಿಸೋಣ:
-ಸೂರ್ಯ, ಚಂದ್ರರಷ್ಟೇ ನಮ್ಮ ಗಡಿಯಾರಗಳಾದರೆ? (ಬೇಗ ಎದ್ದು ಆಕಾಶದಲ್ಲಿ ಸೂರ್ಯನನ್ನು, ಸಂಜೆ ಆಫೀಸಿನಿಂದ ಆಚೆ ಬಂದು ಮೋಡದಲ್ಲಿರುವ ಚಂದ್ರನನ್ನು ನೋಡಬೇಕಷ್ಟೆ)

- ಮುಂಜಾನೆ ರಂಗೋಲಿ ಇಡುತ್ತಾ ಅಕ್ಕ ಪಕ್ಕದ ಮನೆಯವರನ್ನು, ಹೂವು-ಹಣ್ಣು ಮಾರುವವರನ್ನು ಕರೆದು ಕಾಫಿ ಕೊಟ್ಟರೆ? (ನೀರು ಬೆರೆಸಿದ ಹಾಲಿನವನಿಗೆ ಅದೇ ಹಾಲಿನ ಕಾಫಿ ಕೊಡುವ ಮಜವೂ ಸಿಗಬಹುದು :))

- ಪ್ರೀತಿ ಮಾಡುವವರಿಗೆ ಮೊಬೈಲ್ ಸೀಮಿತ ಅವಧಿಗೆ ಮಾತ್ರ, ಮದುವೆ ಆದರಂತೂ ಇಬ್ಬರ ಬಳಿಯಲ್ಲೂ ಮೊಬೈಲ್ ಇರಕೂಡದು ಹಾಗೂ ಇಬ್ಬರೂ ಒಂದೇ ಊರಿನಲ್ಲಿದ್ದರಷ್ಟೆ ಕೆಲಸ ಎಂದು ಕಾನೂನು ಇದ್ದರೆ...(ಇಲ್ಲ ಎಂದರೆ ಮಕ್ಕಳಿಗೆ ಅಪ್ಪ, ಅಮ್ಮನ ಚಿತ್ರಗಳೂ ಇರದೆ ಮೊಬೈಲ್ ನಂಬರ್ ಇರುತ್ತದೆ ಅಷ್ಟೆ)

- ಮಕ್ಕಳಿಗೆ ಕಡ್ಡಾಯ ಸಂಜೆ ಕತ್ತಲಾಗುವವರೆಗೂ ಆಟ. ನಂತರ ದೇವರ ಸ್ಮರಣೆ. ಮಕ್ಕಳಿರುವ ಮನೆಗೆ ಅಂತರ್ಜಾಲ ಸಂಪರ್ಕ, ೧೮ ವರುಷದ ತನಕ ಯಾವ ರಿಯಾಲಿಟಿ ಶೋ ನಲ್ಲೂ ಪ್ರವೇಶವಿಲ್ಲದಿದ್ದರೆ...(ಆಹಾ! ಕೈ ಕಾಲೆಲ್ಲ ಮಣ್ಣು ಮಾಡಿಕೊಂಡು ಸುಸ್ತಾಗಿ ಬಂದು ಮನೆಯಲ್ಲಿ ಕೂತರೆ...)

-ಹೆಂಗಸರಿಗೆ ವಾರದ ಮೂರು ದಿನವಷ್ಟೆ ಆಫೀಸಿನಲ್ಲಿ ಕೆಲಸ, ಮತ್ತೆರಡು/ಮೂರು ದಿನ ಮನೆಯಲ್ಲಿ ಕೆಲಸ ಕಡ್ಡಾಯವಾದರೆ..
(ಅಯ್ಯೋ..ಊಹಿಸಿದರೇನೆ ಎಷ್ಟು ಸುಖವೆನಿಸುತ್ತದೆ)

-ನಿವೃತ್ತರಾದವರಿಗೆ ಬೀದಿಗೊಂದು ಹರಟೆ ಕಟ್ಟೆ. ತಿಂಗಳಿಗೊಮ್ಮೆ ಮಕ್ಕಳ ಜೊತೆ ಪ್ರವಾಸ...(ನೆನಪಿರಲಿ ನಾವೂ ನಿವೃತ್ತರಾಗುತ್ತೇವೆ ಮುಂದೆ!!!)

 ನಮ್ಮ ಗಡಿಯಾರವನ್ನು ನಿಲ್ಲಿಸಿ, ಯೋಚಿಸೋಣವೇ?

ಒಂದು ಚಿಕ್ಕ ವಿಷಯ, ಆದರೆ ಈ ಬರಹಕ್ಕೆ ತಕ್ಕಂತೆ ನಡೆಯಿತು... ಇದೆ ಈ ಬ್ಲಾಗ್ ಬರೆಯುವಾಗ...ಮೊದಲು ನಾನು ಈ ಬರಹವನ್ನು ’ಬರಹ’ದಲ್ಲಿ ಪೋಣಿಸಿ ಎಲ್ಲಾ Save ಮಾಡಿದ್ದೆ...ಇದ್ದಕ್ಕಿದ್ದಂತೆ laptop restart ಆಗಿದ್ದರಿಂದ ಬರೆದದ್ದೆಲ್ಲಾ ಮಾಯವಾಯಿತು! Laptop ಗೆ ಸರಿಯಾದ ಸಮಯದಲ್ಲಿ ವಿದ್ಯುತ್ ಸಂಪರ್ಕ ಸಿಗದೆ ಅದು ನಾನು ಬರೆದಿದ್ದನ್ನೆಲ್ಲಾ ಹಾಳುಮಾಡಿತು. ನಾನು ಆ ಫೈಲ್ ನಲ್ಲಿರುವ ಬರಹವನ್ನು ಮತ್ತೆ ಪಡೆಯಲು ಎಷ್ಟೇ ಪ್ರಯತ್ನ ಪಟ್ಟರೂ ಸಾಧ್ಯವಾಗಲಿಲ್ಲ. ಮತ್ತೆ ಬರೆಯಲು ಕುಳಿತೆ, ರಾತ್ರಿ ೧೨ ಆಗಿತ್ತು, ಈಗ ಬೇಡವೆಂದು shutdown ಮಾಡಿದೆ. ನನ್ನ ಸಹೋದ್ಯೋಗಿಯೊಬ್ಬರು recovery tools ಇದೆ ಮೇಡಮ್ ಅಂದರು, ಖುಷಿಯಾಯಿತು, ಆದರೆ ಫೈಲ್ ತಾಂತ್ರಿಕ ದೋಷದಿಂದ ಹಾಳಾಗಿದ್ದರಿಂದ ಸಾಧ್ಯವಾಗಲಿಲ್ಲ ಎಂದಾಗ ನನ್ನ ಮನಸ್ಸಿಗೆ ಬಂದ ವಾಕ್ಯ: "ಒಡೆದ ಮುತ್ತು, ಕಳೆದ ಕ್ಷಣ ಯಾವುದೂ ಮತ್ತೆ ಸಿಗದು...ಹಾಗೆ corrupted file!!! :)". ನನ್ನ ಬರಹದ ವಿಷಯಕ್ಕೆ ತಕ್ಕಂತೆ ಈ ರೀತಿಯಾಗಿದ್ದು ಒಂದು ಕಾಕತಾಳೀಯ...

8 comments:

Sahana Kashyap said...

Awesome post. I liked this painting. What a finishing!! Keep painting. Likewise let your thoughts flow through kannada poems.

Keep posting often ;)

Prashanth said...

ಸುಮನ, ಕ್ಷಮಿಸಿ! ನಿಮ್ಮ ಈ ಬರವಣಿಗೆಯ ಒಕ್ಕಣೆಯನ್ನು ಅರ್ಥೈಸಿಕೊಳ್ಳಲು ನನಗೆ ಸಾಧ್ಯವಾಗಲಿಲ್ಲ.

Sumana said...

ಮತ್ತೊಮ್ಮೆ ಓದಿ ನೋಡಿ. ನಿಮಗರ್ಥವಾಗದಷ್ಟು ಕ್ಲಿಷ್ಟವಾಗಲಿ, ತಿಳಿಯದ ವಿಷಯವಾಗಲಿ ಯಾವುದೂ ಇಲ್ಲ. ನಮ್ಮ ನೋಡುವ ಅಥವಾ ಓದುವ ದೃಷ್ಟಿ ಬೇರೆಯಷ್ಟೆ.
ಹುಟ್ಟಿದಾಗಿನಿಂದ ಈ ಸಮಯ ನಮ್ಮೊಟ್ಟಿಗೆ ಬರುತ್ತದೆ, ಅದರೊಟ್ಟಿಗೆ ನಾವು ಓಡುತ್ತಿದ್ದೇವೆ. ನಮ್ಮ ಕೆಲಸಗಳಲ್ಲಿ ನಾವೆಷ್ಟೋ ಸಾಧನೆ ಮಾಡಿದ್ದೇವೆ ಎಂದುಕೊಂಡರೂ ಅದು ಬರೀ ನಮಗಾಗಿ. ಯಾಂತ್ರಿಕ ಬದುಕಿಗೆ ಬದಲಾಗಿ ನಮ್ಮ ಜೀವಿತಾವಧಿಯಲ್ಲಿ ಬೆರಳೆಣಿಕೆಯಷ್ಟು ಮಿತ್ರರನ್ನುಗಳಿಸಿ ಉಳಿಸಿಕೊಳ್ಳುವುದೂ ಕಷ್ಟವಾಗಿದೆ. ಕೆಲವು ಸಲ ಸಮಯದೊಟ್ಟಿಗೆ ಬರುವ ಬದಲಾವಣೆಗಳನ್ನು ಒಪ್ಪಿಕೊಳ್ಳಲಾಗದಿದ್ದಾಗ, ಪ್ರೀತಿ ಮಾಡಿ ಮದುವೆಯಾದರೂ ಮನಸುಗಳೆರಡು ಒಡೆಯುತ್ತಿವೆ. ಒಡೆದ ಮನಸ್ಸಿಗೆ ಇದೇ ಸಮಯವೇ ಮದ್ದಾಗುತ್ತಿದೆ. ಇದೇ ಸಮಯವನ್ನು ಸ್ವಲ್ಪ ನನ್ನ ಕಲ್ಪನೆಯಲ್ಲಿ ಹಿಡಿಯಲು ಯತ್ನಿಸಿದ್ದೇನೆ ಅಷ್ಟೆ. ಸಮಯಕ್ಕೆ ತಕ್ಕಂತೆ ಕೆಲವು ಬದಲಾವಣೆಗಳಾದರೆ ನಮ್ಮ ಪರಿಸರ ಹಾಗು ದಿನಚರಿಯಲ್ಲಿ ....ಊಹಿಸಿ ನೋಡಿ. ನಿಮ್ಮ ಪರಿಸರದಲ್ಲಿ ಇವೆಲ್ಲಾ ಈಗಾಗಲೆ ಇದ್ದರೆ ಸಂತೋಷ. ಕೊನೆಗೆ ನಮ್ಮ ಅಧೀನದಲ್ಲಿರದ ಈ ಸಮಯವೆಂಬುದೊಂದು ಹೇಗೆ ಆಟವಾಡುತ್ತಿದೆ ಎಂಬುದನ್ನು ನನ್ನ ಭಾಷೆಯಲ್ಲಿ, ನಾ ಕಂಡ ಪರಿಸರದ, ಆರೋಗ್ಯಕರ ಬದಲಾವಣೆಯನ್ನು ಕಲ್ಪಿಸಿದ್ದೇನೆಯಷ್ಟೆ. ಇದನ್ನು ಆಲೋಚಿಸಲು ನಿಮ್ಮ ಸಮಯವನ್ನು ಒಮ್ಮೆ ನಿಲ್ಲಿಸಿ.. ...ಆತುರವಿಲ್ಲ.

Prashanth said...

ಜೀವನವನ್ನು ಸಮಯದೊಡನೆ ಸಮನ್ವಯಗೊಳಿಸುವ ಪ್ರಯತ್ನ ಎನಿಸುತ್ತದೆ. ಆದರೆ, ನನ್ನ ಚಿಂತನೆಯಲ್ಲಿ, ನಮ್ಮ ಜೀವನದ ಗುಣಮಟ್ಟವು 'ಸಮಯ'ದೊಂದಿಗೆ ಯಾವುದೇ ನೇರವಾದ ಸಂಬಂಧ ಹೊಂದಿರುವಂತೆ ಕಾಣುವುದಿಲ್ಲ. ಬರಿಯ ಗಡಿಯಾರದಲ್ಲಿನ ಸಮಯವನ್ನು ನಿಲ್ಲಿಸಿದರೆ ಸಾಲದು; ಬದಲಾಗಿ ನಮ್ಮ ದೈನಂದಿನ ಜೀವನದ ಹುಚ್ಚು ಸ್ಪರ್ಧೆಗಳಿಂದ ಒಮ್ಮೆ ದೂರ ಸರಿದು, ಅಂತರಂಗದ ಕಣ್ಣುಗಳಿಂದ, ಹೃದಯವಂತಿಕೆಯ ನೋಟದಿಂದ ಜೀವನವನ್ನು ಪ್ರೀತಿಯಿಂದ ನೋಡಲೆತ್ನಿಸಿದರೆ ಅರ್ಥಪೂರ್ಣವೆನಿಸಬಹುದಲ್ಲವೇ?

ದಯಮಾಡಿ ಇದನ್ನು ವಾದ-ವಿವಾದ ಎಂದು ತಿಳಿಯದೆ, ವಿವಿಧ ದೃಷ್ಟಿಕೋನದ ಆರೋಗ್ಯಕರ-ಪೂರಕ ಚಿಂತನೆಗಳನ್ನು ಹಂಚಿಕೊಳ್ಳುವ ವಿಧಾನವೆಂದು ಪರಿಗಣಿಸಬೇಕಾಗಿ ಕೋರಿಕೆ.

Sumana said...

ಸಮಯದೊಟ್ಟಿಗೆ ನಮ್ಮ ಜೀವನದ ಗುಣಮಟ್ಟ ಕ್ಷೀಣಿಸುತ್ತಿದೆಯಾದ್ದರಿಂದ ಸಮಯಕ್ಕೆ ನೇರ ಸಂಬಂಧವಿದೆ ಎಂದನೆಸುತ್ತದೆ. ಸಹಜತೆಗೆ ದೂರ ಹೋಗುತ್ತಿದ್ದೇವೆ.
ಗಡಿಯಾರವನ್ನು ನಿಲ್ಲಿಸೋಣವೆಂದರೆ ಅದರ ಅರ್ಥ ನಿಮ್ಮ ಕೈ ಗಡಿಯಾರವೋ ಅಥವಾ ಗೋಡೆ ಗಡಿಯಾರವನ್ನು ನಿಲ್ಲಿಸಿ ಎಂದಲ್ಲ :).
ನಾವು ಓಡುತ್ತಿರುವ ವೇಗವನ್ನು ಒಮ್ಮೆ ನಿಲ್ಲಿಸಿ, ಯೋಚಿಸಿ, ಯಾವುದು ನಮ್ಮ ದಿನಚರಿಗೆ, ಪರಿಸರಕ್ಕೆ ಸಮಂಜಸವೋ ಅದಕ್ಕೆ ಸರಿಹೊಂದುವಂತೆ ಬದಲಾಗೋಣವೆಂದು ನನ್ನ ಅಭಿಪ್ರಾಯ. ಈಗಾಗಲೆ ಆಗಿಹೋಗಿರುವ ಅರ್ಥಪೂರ್ಣವಲ್ಲದ ಬದುಕಿನಿಂದ, ನೀವು ಹೇಳಿರುವ ಹಾಗೆ ಅರ್ಥಪೂರ್ಣ ಬದುಕಿಗೆ ಹೋಗಬೇಕಾದರೆ ನಮ್ಮೊಳಗೆ ನಾವು ಅವಲೋಕಿಸಬೇಕಾಗುತ್ತದೆ..ಅದಕ್ಕೆ ಸ್ವಲ್ಪ ಸಮಯವನ್ನು ಉಪಾಯೋಗಿಸಿದರೆ ಉತ್ತಮವೆಂದು ನನ್ನ ಅಭಿಪ್ರಾಯ.

ನಿಮ್ಮ ಅನಿಸಿಕೆಗಳಿಗೆ ಈ ಬ್ಲಾಗ್ ನಲ್ಲಿ ಎಂದಿಗೂ ಸ್ವಾಗತ. ಇಲ್ಲಿ ವಾದ-ವಿವಾದದ ಪ್ರಶ್ನೆಯಿಲ್ಲ. ಹಾಗೆ, ನಾನ್ಯಾವ ದೊಡ್ಡ ಬರಹಗಾರ್ತಿಯಲ್ಲ. ಇದೆಲ್ಲಾ ನನ್ನೊಳಿಗಿನ ಭಾವಾನೆಗಳನ್ನು ನನ್ನ ಸಾಧಾರಣ ಭಾಷೆಯಲ್ಲಿ ಮನನ ಮಾಡಲೆಂದು ಪ್ರಾರಂಭಿಸಿರುವುದು :).

Prashanth said...

ಸುಮನ, ನೀವೇ ಹೇಳಿದಂತೆ ನಾವು ನಿಲ್ಲಿಸಬೇಕಾದದ್ದು 'ನಾವು ಓಡುತ್ತಿರುವ ವೇಗವನ್ನು'; 'ಸಮಯ'ವನ್ನಲ್ಲ. ಅಲ್ಲವೇ? ನಮ್ಮ 'ಜೀವನದ ವೇಗಕ್ಕೂ', 'ಸಮಯಕ್ಕೂ' ವ್ಯತ್ಯಾಸವಿದೆಯಲ್ಲವೇ? ನಾನು ಇದನ್ನೇ ಹೇಳಲು ಪ್ರಯತ್ನಿಸುತ್ತಿದ್ದೆ :o)

Sumana said...

ಈ ನನ್ನ ವಿಷಯಕ್ಕೆ ನೀವು ಇಷ್ಟೊಂದು ಗೊಂದಲಕ್ಕೆ ಒಳಗಾಗಿರುವುದು ನೋಡಿ ಸಂತೋಷವಾಯಿತು. ಏಕೆಂದರೆ ವಿಷಯ ಅರ್ಥವಾಗುವುದೇ ಗೊಂದಲ ಶುರುವಾದಾಗ!! :) ನಿಮ್ಮ ಸಮಯವನ್ನು ನಿಮ್ಮೆಲ್ಲಾ ಬೇರೆ ಕೆಲಸಗಳಿಂದ ಸ್ವಲ್ಪ"ನಿಲ್ಲಿಸಿ" :), ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿರುವುದಕ್ಕೆ ಧನ್ಯವಾದ.
ಇದು ಸಮಯಕ್ಕೂ, ವೇಗಕ್ಕೂ ಇರುವ ವ್ಯತ್ಯಾಸದ ವಿಷಯವಲ್ಲ. ಎರಡೂ ಬೇರೆ ನಿಜ, ಆದರೆ ಸಂಬಂಧವಿದೆಯಿಲ್ಲಿ. ಸಮಯವನ್ನು ನಿಲ್ಲಿಸಿದರೆ ವೇಗ ಕಡಿಮೆ ಆಗುತ್ತದೆ, ವೇಗ ಕಡಿಮೆಯಾದಲ್ಲಿ ಹೆಚ್ಚು ಸಮಯ ಸಿಕ್ಕುವುದರಿಂದ,ಒಳ್ಳೆಯ ಆಲೋಚನೆಗಳು ಬೆಳೆಯುತ್ತವೆ. ಇದಕ್ಕೆ ನಾವು ಸಧ್ಯಕ್ಕೆ ನಮ್ಮ ಕೆಲಸಗಳಿಂದ ಸ್ವಲ್ಪ ಸಮಯವನ್ನು ಈ ರೀತಿಯ ಯೋಚನೆಗಳಿಗೆ ಉಪಯೋಗಿಸಿ, ಬದಲಾವಣೆ ತಂದರೆ ಎಂದು. ನೀವು ಹೇಳುತ್ತಿರುವುದು, ನಾನು ಹೇಳಿದ್ದೇ ಆಗಿರುವುದರಿಂದ, ನಿಮಗಾಗಲೆ ಒಕ್ಕಣೆ ಅರ್ಥವಾಗಿದೆ. :)

Anonymous said...

Interesting thoughts!

ನಾವು most of the times, ಇದು 'ಮಾಡಬೇಕ...?ಬೇಡ್ವಾ...?' ಮಾಡಲಾ...?ಬೇಡ್ವಾ...? ಅಂತಾನೆ timepass ಮಾಡ್ತೀವಿ!

Nice ideas about 'stopping the clock' :)

--Chidu