Today's Quote...

"Brightness is sun's nature, coolness is
water's nature, heat fire's nature. Similarly the
nature of Atma is Sath (Absolute Existence),
Chith (Absolute Knowledge) Ananda
(Absolute Bliss), Permanence and Purity." - Atmabodha, Aadi Sankaracharya.

Wednesday, February 23, 2011

ಒಂದೇ ಒಂದು ’ ಛಾಟಿ’ ಏಟು...!
ನನಗೇ ಏಕೆ ಹೀಗೆ..? ನಾನ್ಯಾಕೆ ಹುಟ್ಟಿದ್ದೇನೆ? ಈ ದೇವರೇ ಇಲ್ಲವೇ....

ಹೀಗೆ, ನಾವು ಅಂದುಕೊಂಡ ಹಾಗೆ ಆಗಲಿಲ್ಲವೆಂದರೆ ನಮಗೇ ತಿಳಿಯದಂತೆ ನಮ್ಮಲ್ಲೇ ಯಾವಾಗಲೂ ಅಡಗಿರುವ ಈ ಪ್ರಶ್ನೆಗಳು ಮೇಲೇಳುತ್ತವೆ. ಆ ಹೊತ್ತಿಗಷ್ಟೆ ಆದ ಅನುಭವದ ಜೊತೆ ಹಿಂದೆಂದೋ ನಮ್ಮೊಟ್ಟಿಗಾದ ಕಹಿ ಅನುಭವಗಳೆಲ್ಲಾ ಒಮ್ಮೆಲೇ ತೆರೆದು ಈ ಪ್ರಪಂಚವೆಲ್ಲಾ ನಮ್ಮೆದುರು ಯುದ್ದಕ್ಕೆ ನಿಂತಂತೆ ಭಾವಿಸುತ್ತೇವೆ. ಕಣ್ಣಲ್ಲಿ ಧಾರಾಕಾರ ನೀರು ತುಂಬಿಟ್ಟುಕೊಂಡು ಮನಸ್ಸಲ್ಲಿ ಹಲವಾರು ಪ್ರತಿಙ್ನೆಗಳು ಮಾಡಿಬಿಡುತ್ತೇವೆ. ’ಇನ್ನು ಈ ಜನ್ಮದಲ್ಲಿ ಅವರನ್ನು ಮಾತನಾಡಿಸುವುದಿಲ್ಲ...’, ’ನಾನಿಷ್ಟೆ ಎಲ್ಲರಿಗೂ ಬೇಡವಾಗಿದ್ದೇನೆ..’, ಹೀಗೆ ನಮಗೇ ಗೊತ್ತಿಲ್ಲದಂತೆ ನಮ್ಮಲ್ಲೇ ಅಡಗಿರುವ ’ಕಲ್ಪನ’, ’ಲಕ್ಷ್ಮಿ’, ’ಶೃತಿ’ ಎಲ್ಲರೂ ಒಟ್ಟಿಗೆ ಗೋಳಿಡಲು ಆರಂಭಿಸುತ್ತಾರೆ.

ಒಮ್ಮೊಮ್ಮೆ ಕೆಲವೊಂದು ಮಕ್ಕಳು ಹಠ ಹಿಡಿಯುವುದನ್ನು ನೋಡಿದ್ದೇವೆ. ಹಠ ಹಿಡಿದಿರುವುದನ್ನು ನೋಡಿದ ಅದರ ಅಮ್ಮ ಕೊನೆಗೆ ಬೇಸತ್ತು ಒಂದೆರಡು ಏಟು ಕೊಟ್ಟ ಮೇಲೆ...ಅದು ಅತ್ತು ನಿಲ್ಲಿಸಿ ಮಲಗುತ್ತದೆ. ಆದರೆ ಆ ಏಟು ಆ ಕ್ಷಣದ ಹಠಕ್ಕೆ ಅಷ್ಟೆ. ಮತ್ತೆ ಅದೇ ಹಠ ಮರುದಿನ ಒಂದಲ್ಲ ಒಂದು ಆಸೆಯಿಂದ ಶುರುವಾಗುತ್ತದೆ. ಇದನ್ನೆ ನಮ್ಮ ಬದುಕಿಗೆ ಒಮ್ಮೆ ಹೊಂದಿಸಿ ನೋಡಿದರೆ, ನಮ್ಮ ವಯಸ್ಸು ಬೆಳೆಯುತ್ತಾ ಬಂದಂತೆ, ಆಸೆಗಳು ಹೆಚ್ಚುತ್ತಿರುತ್ತವೆ. ಒಮ್ಮೊಮ್ಮೆ ಆಸೆ ಈಡೇರದಿದ್ದರೆ, ಪ್ರಪಂಚ ನಮ್ಮ ವಿರುದ್ದ ಕಾಣುತ್ತದೆ. ಮನಸ್ಸು ಹಠಹಿಡಿಯುತ್ತದೆ. ಬುದ್ದಿ ಮಂಕಾಗುತ್ತದೆ. ಇದು ಅಮ್ಮ, ಅಪ್ಪನಿಂದ ತೀರಿಸುವ ಚಿಕ್ಕ ಪುಟ್ಟ ಆಸೆಯಾಗಿದ್ದರೆ ಯಾರಾದರೊಬ್ಬರಿಂದ ಈಡೇರಿಸಿಕೊಳ್ಳುತ್ತೇವೆ, ಇಲ್ಲದಿದ್ದರೆ ನಮ್ಮ ಬದುಕಿನ ಮರೆಯಲಾಗದಂತ ಛಾಟಿ ಏಟು ತಿಂದು ಎಚ್ಚೆತ್ತುಕೊಳ್ಳಬೇಕಾಗುತ್ತದೆ.

ಕೆಲವೊಂದು ಘಟನೆಗಳು ನಮಗೆ ಬುದ್ದಿ ಕಲಿಸಲೆಂದೇ, ಎಂದು ನಾನು ನಂಬುತ್ತೇನೆ. ನಮ್ಮ ಒಂದೊಂದೇ ಕೆಟ್ಟ ಸ್ವಭಾವಗಳಿಂದ ನಮ್ಮನ್ನು ದೂರ ಸರಿಸಲು ಆ ದೇವರ ಛಾಟಿ ಏಟೆಂದು ಭಾವಿಸುತ್ತೇನೆ. ನಾನು ಇದರಿಂದ ಕಲಿತಿರುವಂತೆ, ನಾವು ಓದಿ ಪಡೆದುಕೊಳ್ಳುವ ಡಿಗ್ರಿಗಳು ನಮ್ಮ ಬದುಕನ್ನು ಕಾಲಕ್ಕೆ ತಕ್ಕಂತೆ ನಡೆಯಲು ಅಷ್ಟೆ. ಆದರೆ ನಮ್ಮ ಭಾವನೆಗಳನ್ನು ಎಷ್ಟರ ಮಟ್ಟಿಗೆ ನಮ್ಮ ಹಿಡಿತದಲ್ಲಿಟ್ಟುಕೊಂಡು ನಮ್ಮ ಇರುವಿಕೆಯ ಉದ್ದೇಶವನ್ನು ಅರಿಯುತ್ತೆವೆಯೋ ಅದಕ್ಕಿಂತ ಒಳ್ಳೆಯ ಪಾಠ ಬೇರಾವುದು ಕಲಿಯಬೇಕಾಗಿಲ್ಲ.

ಏನನ್ನೋ ಕಳೆದುಕೊಂಡಂತೆಯೇ ಯಾವಾಗಲೂ ಇರುವ ನಾವು ಪ್ರತಿಯೊಂದನ್ನು ಸಂಪಾದಿಸಿದಾಗಲೂ, ಮತ್ತೊಂದಕ್ಕೆ ಹೊಂಚು ಹಾಕುತ್ತೇವೆ. ನಿಲ್ಲದ ನಮ್ಮೀ ಹುಡುಕಾಟಕ್ಕೆ ನಮ್ಮ ಬಾಳನ್ನು ದೂಷಿಸುತ್ತೇವೆ. ಇದರ ಬದಲು ಒಮ್ಮೆ ನಮ್ಮಲ್ಲಿರುವ ಎಲ್ಲವನ್ನು ಒಮ್ಮೆ ಕಣ್ಣು ತೆರೆದು ನೋಡಿದರೆ, ನಮ್ಮಷ್ಟು ಖುಷಿ ಪಡುವವರು ಇರುವುದಿಲ್ಲ. ಏಳುವಾಗ, ಮಲಗುವಾಗ ಒಮ್ಮೆ ಖುಷಿಯಿಂದ, ನಗು ಮುಖದಿಂದ ನೋಡಿ,ನಮ್ಮಲ್ಲಿರುವ ಎಲ್ಲವನ್ನು ಒಮ್ಮೆ ಮನನ ಮಾಡಿಕೊಂಡರೆ ಸಾಕು. ಬೇಕು ಬೇಕೆನ್ನುವ ಪಟ್ಟಿ ಸರಿಯುತ್ತದೆ. ಎಷ್ಟೇ ಆಸೆಗಳಿದ್ದರೂ ನಮಗೆ ಒಳ್ಳೆಯ ನಿದ್ದೆ,ನೆಮ್ಮದಿಯ ಊಟ,ಮಾತನಾಡಲು ನಮ್ಮವರೆನ್ನಲು ಇರದಾಗ ಬಾಳಿಗೆ ಅರ್ಥವಿಲ್ಲ.

’ಕಾಣದಾ ಕಡಲಿಗೆ ಹಂಬಲಿಸಿದೇ ಮನ,
ಕಾಣಬಲ್ಲೆನೇ ಒಂದು ದಿನ
ಕಡಲನು ಸೇರಬಲ್ಲೆನೇ ಒಂದು ದಿನ...’

ಎಂಬ ಕವಿಯ ಮನಸ್ಸು ಯಾವ ಸ್ಥಿತಿಯಲ್ಲಿತ್ತೋ, ಆದರೆ ಒಮ್ಮೆ ಈ ಸಾಲುಗಳನ್ನು ನಾವು ದುಃಖದಲ್ಲಿದ್ದಾಗ ಓದಿದರೆ ನಮಗೇ ಬರೆದಂತೆ ಕಾಣುತ್ತದೆ. ಆದರೆ ಸಂತೋಷದಲ್ಲಿದ್ದಾಗ ಮನಸ್ಸಿಗೆ ಇದು ಒಂದು ಹಾಡಷ್ಟೆ..
ಯಾವುದದು ಕಡಲು? ನಮ್ಮ ಆಸೆಗಳ ಕಡಲೇ, ಅದಕ್ಕೆ ಮಿತಿಯಿಲ್ಲ... ನಮ್ಮ ಬಾಳಿಗೆ ಸಿಗಬೇಕೆನ್ನುವ ಮುಕ್ತಿಯ ಕಡಲೆ, ಸಿಕ್ಕಿದಾಗ ಅದರ ಸಂತೋಷವನ್ನು ಹಂಚುವುದಾದರೂ ಯಾರ ಜೊತೆ?

ಪರೀಕ್ಷೆಯಲ್ಲಿ ನಪಾಸದೆನೆಂದು, ಯಾರಿಂದಲೋ ಅವಮಾನವಾಯಿತೆಂದು, ಪ್ರೀತಿಮಾಡಿದವರು ಸಿಗಲಿಲ್ಲವೆಂದೂ, ಮದುವೆ ಮುರಿಯಿತೆಂದು, ಯಾವ ಕೆಲಸವೂ ಫಲಿಸದೆಂದು...ಹೀಗೆ ನಮ್ಮ ಗೋಳು ಹತ್ತು ಹಲವು. ಆದರೆ ನಮಗೆ ಬಂದರಷ್ಟೇ ನಮಗದರ ಪ್ರಭಾವ ತಟ್ಟುವುದು, ಇಲ್ಲದಿದ್ದರೆ ಅದಕ್ಕೆ ನಮ್ಮಲ್ಲಿ ಸಿದ್ದ ಉಪದೇಶಗಳುಂಟು. ನಾವು ಎಷ್ಟೇ ಜಾಗರೂಕರಾಗಿ ಮುಂದಿನ ಹೆಜ್ಜೆಯಿಟ್ಟರೂ ಎಡುವುದಕ್ಕೆ ಹತ್ತಾರು ಅಡಚಣೆಗಳಿರುವುದಂತೂ ನಿಜ. ಆದರೆ ನನ್ನ ಪ್ರಕಾರ ಈ ರೀತಿಯ ಗೋಳುಗಳು ಜೀವನದ ಕಥೆಯನ್ನೇ ಮುಗಿಸಿದೆ ಎಂದು ಸಾಯುವುದಕ್ಕೆ ಕ್ಷಣಗಣನೆ ಮಾಡುವ ಬದಲು, ಬದುಕಲು ಉಳಿದಿರುವ ಅಲ್ಪ ಸಮಯದಲ್ಲಿ ಏನೆಲ್ಲಾ ನಮ್ಮಿಂದ ಆಗಬಹುದು ಎಂದು ನಮ್ಮನ್ನು ನಾವು ಅರಿಯಬಹುದು.

ಹಠ ಮಾಡಿ, ಹೊಡೆತ ತಿಂದ ಮಗು ಮತ್ತೆ ತನ್ನ ಆಟ ಪಾಠಗಳಲ್ಲಿ ತೊಡಗಿ, ಮತ್ತದೇ ತಪ್ಪು ಮಾಡುವಾಗ ಎಚ್ಚರವಹಿಸುವಂತೆ, ನಾವೂ ನಮ್ಮ ತಪ್ಪುಗಳನ್ನು ಅರಿತರೆ ಚೆನ್ನಾಗಿರುತ್ತದೆ. ಏನನ್ನು ಸಾಧಿಸಲಿಕ್ಕಾಗದಿದ್ದರೂ ಈ ಸುಂದರ ಮಾಯಾ ಜಗತ್ತಿನ ಸೌಂದರ್ಯವನ್ನು ಸವಿಯುತ್ತಾ ಯಾರೊಬ್ಬರಿಗಾದರೂ ಮುಂದಿನ ಬಾಳಿನ ದೀಪದಂತಾದರೆ ಅಷ್ಟೇ ಸಾಕಲ್ಲವೇ?

ಯಾಕ್ರೀ ಬೇಕು ಈ ಗೋಳು...? ಇಂತಹ ಪರಿಸ್ಥಿತಿಗಳು ಬಂದಾಗ ಬೇರೆಯವರು ಏನನ್ನುತ್ತಾರೋ ಎಂದು ಹೆದರುತ್ತೇವೆ, ಹೋಗಿ ಮತ್ತೊಬ್ಬರ ಉಪದೇಶ ಕೇಳಿ ಹಾಳಾಗುತ್ತೇವೆ. ಬುದ್ದಿ ಬೆಳೆದಿದ್ದರೆ ಆ ದೇವರ ಒಂದು ಛಾಟಿ ಏಟಿನ ನೋವು ಅರಿವಾದರೆ ಮಾತ್ತೊಬ್ಬರ ಉಪದೇಶವಾದರೂ ಯಾಕೆ? ನಮ್ಮನ್ನು ಈ ನಮ್ಮ ಪರಿಸರ ಇಷ್ಟು ದಿನ ಸಹಿಸಿರುವುದು ನಮ್ಮ ಅಳುವಿಗಾ? ನಾವ್ಯಾವುದಾದರೂ ಮನಸ್ಸಿಗೆ ದುಃಖಕೊಡುವಂಥಹ ಘಟನೆಗೆ ಒಳಗಾಗಿದ್ದರೂ ಅದಕ್ಕೆ ಅಳಲಾಗುವುದು ಕೇವಲ ಕೆಲವು ದಿನಗಳು ಮಾತ್ರ, ಕಾಲವಿದನ್ನೆಲ್ಲಾ ಮರೆಸಿಬಿಡುತ್ತದೆ...ಹೀಗಿರುವಾಗ ಒಮ್ಮೆ ಕಣ್ಣು ತೆರೆದು ನಮಗಾಗಿ ನಮ್ಮ ಇರುವಿಕೆಗಾಗಿ ಬಾಳುವುದರಲ್ಲಿ ತಪ್ಪಿಲ್ಲವೆನಿಸುತ್ತದೆ.ಇದಕ್ಕೆ ಒಂದೇ ಒಂದು ’ ಛಾಟಿ’ ಏಟು ಸಾಕು!!! ನೀವೇನನ್ನುತ್ತೀರ...?

4 comments:

Prashanth said...

ಸುಮನ, ಬಹಳ ದಿನಗಳ ನಂತರ ನಿಮ್ಮದೊಂದು ಲೇಖನ ಓದುವ ಅವಕಾಶ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು.

'ಬಾಳಿನ ಏಳು-ಬಿಳುಗಳನ್ನು ಸಮಾನವಾಗಿ ಸ್ವಿಕರಿಸಬೇಕು' ಎಂಬುದನ್ನು ಉಪದೇಶ ಮಾಡಿದಷ್ಟು ಸುಲಭದಲ್ಲಿ ಆಚರಣೆಗೆ ತರಲು ಸಾಧ್ಯವಿಲ್ಲ ಎನ್ನುವುದು ನನ್ನ ವೈಯಕ್ತಿಕ ಅನಿಸಿಕೆ. ನೀವು ಹೇಳಿದಂತೆ, ಬದುಕಿನಲ್ಲಿ ಬರುವ ಕಷ್ಟ, ದುಃಖ, ನೋವು ಇತ್ಯಾದಿಗಳಿಂದ ಪಾಠ ಕಲಿತು ಮುಂದಿನ ದಿನಗಳಲ್ಲಿ ಉತ್ತಮ ಬದಿಕಿಗಾಗಿ ಇದಿರುನೋಡುವುದು ಸಕಾರಾತ್ಮಕ ಮನೋಭಾವ - ಇದನ್ನು ಪ್ರತಿಯೊಬ್ಬರೂ ರೂಡಿಸಿಕೊಳ್ಳಬೇಕು ಎಂಬ ನಿಮ್ಮ ಕಿವಿಮಾತು ಅತ್ಯಂತ ಸಮಂಜಸ. ಬದುಕಿಗೊಂದು ದಾರಿ ತೋರಿಸುವಂಥ ನಿಮ್ಮ ಪ್ರಬುಧ್ಧ ಬರವಣಿಗೆ ಹೀಗೆಯೇ ಮುಂದುವರಿಯಲಿ :o)

Sumana said...

ಧನ್ಯವಾದಗಳು ಪ್ರಶಾಂತ್. ಆಗೊಮ್ಮೆ ಈಗೊಮ್ಮೆ ಬರೆಯುವ ನನಗೆ, ನಿಮ್ಮಂಥವರ ಪ್ರೋತ್ಸಾಹ ಮುಖ್ಯ. ಉಪದೇಶ ಕೊಡುವಷ್ಟು ದೊಡ್ದವಳಲ್ಲ, ಆದರೆ ಕೆಲವೊಂದು ಕಲಿತ ಪಾಠಗಳನ್ನು ಹಂಚುವ ಅಭಿಪ್ರಾಯವಷ್ಟೇ.

Arvi said...

ಸುಮನ,
ಛಾಟಿ ಏಟು ಅಂತ ಅಂದ್ಕೊಂಡು ವ್ಯಥೆ ಪಡುವುದಕ್ಕಿಂತ ಜೀವನ ಅಂದ್ರೆ ಈ ತರಹ ನೋವು ನಲಿವು ಸಾಮಾನ್ಯ ಅಂತ ತಿಳಿಯೋಕೆ ಆಗೋಲ್ವೇ !... ಪಾಪ ಎಲ್ಲದಕ್ಕೂ ದೇವರನ್ನ ಹೊಣೆ ಮಾಡೋದು ಎಸ್ಟು ಸಮ್ಮತ ಹೇಳಿ ? :)

ನಾವು ಮಾಡೋ ತಪ್ಪು ನಮಗೆ ಗೊತ್ತಿರುತ್ತೆ ಅಲ್ವೇ.. ಆ ತಪ್ ಮಾಡಿ ಅದರ ಫಲ ಬಂದಾಗ ದೇವ್ರು ಛಾಟಿ ಏಟು ಕೊಟ್ಟ ಅಂದೊಕೊಂಡು ಆ ತಪ್ ತಿದ್ದುಕೊಳೋಕೆ ಕಾರಣ ಹೂಡ್ಕೋಕಿಂತ.. ನಾವು ಮಾಡ್ತಿರೋದು ಸರೀನಾ ಅಂತ ಒಮ್ಮೆ ಯೋಚ್ನೆ ಮಾಡಿ ಮುಂದುವರಿದ್ರೆ ಹೀಗೆ ದೇವರಿಗೆ ಅಪವಾದ ಹೋರ್ಸೋದು ತಪ್ಪುತ್ತೆ ಅಲ್ವೇ.. :)

ನನ್ನ ಅನಿಸಿಕೆ ಅಷ್ಟೇ.. ನಿಮ್ಮ ಸಂದೇಶನ ತೀರಸ್ಕಾರ್ ಮಾಡ್ತಿದೀನಿ ಅಂತ ತಪ್ಪು ತಿಳೀಬೇಡಿ .. :)

-Arvi

Sumana said...

'ನೀವೆನನ್ನುತ್ತೀರ?' ಎಂದು ಕೇಳಿರುವುದೇ ನಿಮ್ಮೆಲ್ಲರ ಅನಿಸಿಕೆಗಳನ್ನು ತಿಳಿದು ಕೆಲವನ್ನು ಕಲಿಯಲಿಕ್ಕೆ. ನಿಮ್ಮೆಲ್ಲರ ವಿಮರ್ಶೆಗಳಿಗೆ ಸ್ವಾಗತ! :)

ನೀವು ಅತ್ತಾಗ ನಿಮ್ಮ ಅಮ್ಮ ಏಟು ಕೊಟ್ಟರೆ ಅವರನ್ನು ಯಾರು ದೂಷಿಸುವುದಿಲ್ಲ. ಹಾಗೆಯೇ ನಾನು ದೇವರನ್ನು ದೂಷಿಸುತ್ತಿಲ್ಲ. ಎಲ್ಲವು ನಮ್ಮಿಂದಲೇ ಆದದ್ದು ನಿಜ, ಆದರೆ ಎಲ್ಲರಿಗು ನಾವು ಮಾಡುತ್ತಿರುವುದು ತಮ್ಮದೇ ತಪ್ಪು ಅಂಥ ತಿಳುವಳಿಕೆ ಬರುವುದು ಅದು ತಪ್ಪೆಂದು ಅರಿವಾದಾಗ ತಾನೆ, ಹಾಗೆ ಕೆಲವೊಂದನ್ನು ನೋಡಿ ಕಲಿಯುತ್ತೇವೆ, ಮತ್ತೆ ಕೆಲವನ್ನು ಅನುಭವದಿಂದ ಕಲಿಯುತ್ತೇವೆ.
ಈ ಅನುಭವ ಎನ್ನುವುದೇ ನಾ ನಿಮ್ಮ ಮುಂದಿಟ್ಟ ಅಭಿಪ್ರಾಯ.