ಈ ಅಂಕಣದಲ್ಲಿ ನಾನು ಬರೆದ ಚಿತ್ರವಲ್ಲ... ನನ್ನ ಪ್ರವಾಸ ಅನುಭವದ ಚಿತ್ರಣವಿದೆ.
ಕೊಡಗು, ಅಬ್ಬೆ ಜಲಪಾತ, ಮಡಿಕೇರಿ ಹೀಗೆ ಎಲ್ಲಾ ಜಾಗಗಳ ಪಟ್ಟಿಯಲ್ಲಿ ಕೊನೆಗೆ ನಮ್ಮ ಪ್ರಯಾಣ ನಿರ್ಧಾರವಾಗಿದ್ದು ’ಭದ್ರೆ’ಯ ಕಡೆಗೆ...
ಹೊರಡುವಾಗ ಸುಮಾರು ಒಂದು ಗಂಟೆ ತಡವಾದ ನಮ್ಮ ಪ್ರಯಾಣ, ಕೆಲವೊಂದು ನಿರ್ಧಾರಗಳಿಂದ ಪ್ರಾರಂಭವಾಯಿತು. ಮುಂದೆ ನಮ್ಮ ಪ್ರವಾಸದ ಪ್ರಾರಂಭ, ಹೊತ್ತು ಮಾಡಿದವರ ಮನೆಯಿಂದ ಎಂದು! ಸೂರ್ಯ ಎದ್ದೇಳುವ ಮುನ್ನ ಹೊರಡಲಾಗದಿದ್ದರೂ...ಸೂರ್ಯನಿಗೆ ಬೆಂಗಳೂರಿನಲ್ಲೇ ’ಹಾಯ್’ ಹೇಳಿತು ನಮ್ಮ ೧೨ ಜನರ ಗುಂಪು. ಇದರಲ್ಲಿ ಇಬ್ಬರು ಚಿಕ್ಕ ಹುಡುಗರು...
’ಹುಡುಗರು’ ಚಿತ್ರ ಬೇಡವೆಂದೆನೆಸಿ, ಕೆಲವೊಬ್ಬರ ಕೋರಿಕೆಯ ಮೇರೆಗೆ ’ಸಂಜು ಮತ್ತು ಗೀತ’ ಪ್ರಾರಂಭಿಸಿದರು. ಬರೀ ಚಲನಚಿತ್ರ ನೋಡುತ್ತಿದ್ದೆವು ಎಂದುಕೊಳ್ಳಬೇಡಿ, ಕಚೇರಿಯ ಹಾಸ್ಯಗಳು, ಹೊಸ ನಾಮಕರಣಗಳು ಇವೆಲ್ಲಾ ನಮ್ಮ ಗುಂಪುನಲ್ಲಿ ಮಾಮೂಲು...ಆದರೆ ಸ್ವಲ್ಪ ತಪ್ಪಾಗಿದ್ದೆ ಈ ಚಿತ್ರದ ಆಯ್ಕೆ.
ನಮ್ಮ ಪ್ರಯಾಣ ಎಲ್ಲಿಗೆ ಎಂತಲೇ ನಾನು ಸರಿಯಾಗಿ ಹೇಳಲಿಲ್ಲ ಅಲ್ವಾ!!!... , ನಾವು ಭದ್ರ ನದಿಯ ಬಳಿಯಿರುವ ಕ್ಯಾಂಪ್ ಗೆ ಮುಂಗಡವಾಗಿ ಕಾದಿರಿಸಿದ್ದೆವು. ಬೆಂಗಳೂರಿನಿಂದ ೨೮೫ ಕಿ.ಮೀ... ಚಿಕ್ಕಮಗಳೂರು, ಶೃಂಗೇರಿ ಕಡೆಗೆ... ಮಧ್ಯಾಹ್ನವಾಗುತ್ತಿದ್ದರಿಂದ ಊಟದ ವ್ಯವಸ್ಥೆಯನ್ನು ಫೋನ್ ನಲ್ಲಿ ವಿಚಾರಿಸಿ ಅಂತೂ ನಮ್ಮ ಗುರಿಯನ್ನು ತಲುಪಿದೆವು. ಮಧ್ಯದಲ್ಲಿ ಮುಂದಿನ ಪ್ರವಾಸದ ಬಗ್ಗೆ ನಮ್ಮ ಹರಟೆ ಸಾಗಿತ್ತು. ತಲುಪುತ್ತಿದ್ದಂತೆ ನಮಗೆ ಒಳ್ಳೆಯ ಉಪಚಾರ ಕ್ಯಾಂಪ್ ನವರಿಂದ. ಮೂರು ಟೆಂಟ್ ಗಳನ್ನು ಆಕ್ರಮಿಸಿ, ಊಟದ ನಂತರ ನೀರಿಗೆ ಇಳಿಯಲು ಸಿದ್ದವಾದೆವು.
ಸ್ನಾನ, ಟೀ ಎಲ್ಲಾ ಮುಗಿಸಿ ಪಕ್ಕದಲ್ಲಿ ಹುಲ್ಲಿನ ಮೈದಾನದಲ್ಲಿ ಕಟ್ಟಿದ್ದ ನೆಟ್ ನಲ್ಲಿ shuttle badminton ಆಡಿದೆವು. ಪಕ್ಕದಲ್ಲಿದ್ದ ಹೊಲವನ್ನು ನೋಡಿದರೆ, ನನಗೆ ನಮ್ಮ office ಇಲ್ಲಿದ್ದಿದ್ದರೆ ಎಂದೆನಿಸಿತು.
ಅಲ್ಲೇ ನಮ್ಮ ಸ್ನೇಹಿತೆಗೆ ಜಿಗಣೆ ಕಚ್ಚಿ, ರಕ್ತ ಬರುತ್ತಿರುವುದು ಕಾಣಿಸಿದಾಗಲೇ ನನಗೆ ಮೊದಲ ಸಲ ಜಿಗಣೆಯ ಪರಿಚಯವಾಯಿತು. ಮತ್ತೆ ಎಲ್ಲರಿಗೂ ಕಾಲುಗಳನ್ನು ನೋಡಿಕೊಳ್ಳುವುದೇ ಆಯ್ತು. ಸೂರ್ಯಾಸ್ತವಾಗುತ್ತಿದ್ದಂತೆ camp fire ಗಾಗಿ ಸುತ್ತ ಕೂತ ನಾವು ಒಂದು ಸಣ್ಣ ಆಟದೊಂದಿಗೆ ಎಲ್ಲರಿಂದ ಒಂದೊಂದು ಕಾರ್ಯಕ್ರಮವನ್ನು ನಡೆಸಿ, ’ಹುಡುಗರು’ ಚಿತ್ರದ ’ನಾ ಬೋರ್ಡು ಇರದ ಬಸ್ಸನ್ನು...ಪಂಕಜ’ ಹಾಡಿಗೆ ಹೆಜ್ಜೆಹಾಕಿದ್ದಾಯ್ತು. ಆ ಸ್ಥಳ ಎಂಥವರನ್ನು ಭದ್ರೆಯ ಮಡಿಲಲ್ಲಿ ಚಿಕ್ಕ ಮಕ್ಕಳಂತಾಗಿಸುತ್ತದೆ!!!
ಹೊಟ್ಟೆ ಹಸಿವಿಗಾಗಿ ಬಿಸಿ ಬಿಸಿ ಊಟ ತಯಾರಿತ್ತು...ಆಡಲು ನಮ್ಮ Engineering ಕಾಲೇಜ್ ನ ಮಾತುಗಳು. ತಿಂದು ಮತ್ತೆ camp fire ನ ಬಳಿ ಸ್ವಲ್ಪ ಹೊತ್ತು ಕೂತೆವು, ನನ್ನ ಸ್ನೇಹಿತರಿಗೆ.. ’ಕನಸ ಮಾರುವ ಚೆಲುವ ಹಾಡ ನಿಲ್ಲಿಸ ಬೇಡ’ ಎಂದೆನಿಸಿದರೆ, ನನಗೆ ’ಅಮ್ಮಾ, ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು...’ ಎಂದೆನಿಸಿತು. ಈ ಎರಡು ಹಾಡುಗಳೊಂದಿಗೆ ನಮ್ಮ ಸ್ವಲ್ಪ ಸಮಯ ಹಾಡಿನಲ್ಲಿ ಕಳೆದೆವು. ದಿನನಿತ್ಯದ ಕೆಲಸಗಳ ಪಟ್ಟಿಯನ್ನು ತಲೆಯಿಂದ ಕಿತ್ತೊಗೆದು, ಮೊಬೈಲ್, ಟಿವಿ, ಸಮಯದ ಜೊತೆ ಓಡುವುದರಿಂದ ವಿಶ್ರಾಂತಿ ಸಿಕ್ಕ ನಮ್ಮೆಲ್ಲರ ಮನಸ್ಸು ಪ್ರಶಾಂತವಾಗಿತ್ತು ಆ ಕತ್ತಲಲ್ಲಿ.ಬೆಳಗಿನಿಂದ ಒಂದೇ ಸಮನೆ ಹರಟೆ, ಪ್ರಯಾಣ, ಚಿಕ್ಕ ಮಕ್ಕಳಂತೆ ನೀರಿನಲ್ಲಿ ಆಡಿ ದಣಿವಾಗಿದ್ದ ನಮ್ಮೆಲ್ಲರಿಗೂ ಟೆಂಟ್ ನಲ್ಲಿ ಮಲಗ್ಗಿದ್ದು ತುಂಬಾ ಒಳ್ಳೆಯ ನಿದ್ದೆ ತಂದಿತು. ಬೆಳಿಗ್ಗೆ, ಕಾಡಿನ ಕಡೆ ಪ್ರಯಾಣ....
ಎದ್ದು ನಾವು ಕಾಡಿಗೆ ’ಸಿದ್ದ’ವಾಗುತ್ತಿದ್ದಂತೆ ಅಲ್ಲಿಯವರು ಟೀ, ಕಾಫಿ ಮಾಡಿಟ್ಟರು. ಅಲ್ಲಿದ್ದ ವ್ಯವಸ್ಥಾಪಕರಲ್ಲಿ ಇಬ್ಬರು ನಮ್ಮನ್ನು ಕಾಡಿನತ್ತ ಕರೆದುಕೊಂಡು ಹೋದರು. ಕಾಲ್ನಡಿಗೆಯಲ್ಲಿ ಸಾಲಾಗಿ ಹೋಗುವುದು, ಅಲ್ಲಿದ್ದ ಜಿಗಣೆಗಳಿಂದ ತಪ್ಪಿಸಿಕೊಳ್ಳುವುದು ಹೊಸ ಅನುಭವ. ನದಿಯ ಒಂದು ದಡದಲ್ಲಿ ಹಿಂದಿನ ದಿನ ಆಡಿದ್ದ ನಾವು, ಈಗ ಮತ್ತೊಂದು ದಡದಲ್ಲಿ ಇದ್ದೆವು. ಆದರೆ ಇದು ಆಟವಾಡಲು ಆಳ ಹೆಚ್ಚಾದ್ದರಿಂದ, ಬಂಡೆಗಳ ಮೇಲೆ ಎಲ್ಲರ photo session ಪ್ರಾರಂಭವಾಯ್ತು. ಪ್ರತಿಯೊಬ್ಬರಿಗೂ ಈ ಫೋಟೊಗಳು Facebook ಗಾಗಿ!!! ನವ ವಿವಾಹಿತರಾಗಿದ್ದ ಒಂದು ಜೋಡಿಗೆ ಇದು ಅವರ ಹೊಸ albums ಗೆ ತಮ್ಮ ಜೋಡಿ ಚಿತ್ರಗಳು...ಮದುವೆಯಾಗದವರಿಗೆ ’ಮಗಧೀರ’ನಿಗಾಗಿ ಬಂಡೆಯ ಮೇಲೆ ಕಾದು ಕೂತ ಚಿತ್ರಗಳು, ಕುಟುಂಬದೊಂದಿಗೆ ಬಂದವರಿಗೆ ಇದೊಂದು perfect photo! ಮತ್ತೆ ಕೆಲವರಿಗೆ ಕಾಲ ಕಳೆಯಲು, ಮರೆಯಲಾಗದ ಕ್ಷಣಗಳನು ಮೆಲುಕು ಹಾಕಲು.
ನಮಗಾಗಿ ಕಾದಿದ್ದ ಇಡ್ಲಿ, ಸಾಂಬಾರ್, ವಡೆಯಿಂದ ಹೊಟ್ಟೆ ತುಂಬಿಸಿ, ಗನ್ ಹಿಡಿದು ದೂರದಲ್ಲಿದ್ದ ಬಾಟಲ್ ಗೆ ೩ ಪ್ರಯತ್ರದಲ್ಲಿ ಹೊಡೆಯುವ ಅನುಭವವೂ ಸಿಕ್ಕಿತು. ಮತ್ತೆ ಭದ್ರೆಗೆ ಇಳಿದೆವು... ಗಂಟೆ ೧೧ ಆಗಿದ್ದರಿಂದ, ಬಿಸಿಲಲ್ಲೇ ತಣ್ಣೀರಿನಾಟ... ಅಲ್ಲಿದ್ದವರು ನನ್ನಂಥವರನ್ನು ನೀರಿನಲ್ಲಿ ತೇಲಿಸಿದರು... ನೀರಿನಲ್ಲಿ Life jacket ಇದ್ದರೂ ಹೆದರುತ್ತಿದ್ದ ನನಗೆ ಮುಂಗಾರು ಮಳೆಯಲ್ಲಿ ಗಣೇಶ್ ಮಲಗಿದ ಹಾಗೆ ಮಲಗಿ ತೇಲಿದ್ದು ಆಕಾಶದಡಿ ಕಣ್ಣು ಮುಚ್ಚಿ ಕನಸು ಕಂಡಂತಿತ್ತು... ಅದೊಂದು ಮತ್ತೆ ಮತ್ತೆ ಆ ಸ್ಥಳಕ್ಕೆ
ಹೋಗಬೇಕೆನೆಸುವ ಅನುಭವ.
ಮತ್ತೆ ಎಲ್ಲರೂ ಬೆಂಗಳೂರಿಗೆ ಸಿದ್ದವಾದೆವು. ೩೦ ಕಿ.ಮೀ ದೂರದಲ್ಲಿದ್ದ ಶೃಂಗೇರಿ ಶಾರದೆಗೂ, ಹೊರನಾಡಿನ ಅನ್ನಪೂರ್ಣೇಶ್ವರಿಗೂ ದೂರದಿಂದಲೇ ನಮಿಸಿ ಹೊರಟೆವು.. ಅಲ್ಲಿಂದ ಬೆಂಗಳೂರಿಗೆ ಬರಲು ಯಾರಿಗೂ ಇಷ್ಟವಿರಲಿಲ್ಲ....ಆದರೂ ಮುಂದಿನ ಪ್ರಯಾಣಕ್ಕಾದರೂ ದುಡಿಯಬೇಕಲ್ಲ..!
ಇದೇ ಸುಂದರ ಪ್ರಕೃತಿಯ ಮಡಿಲಲ್ಲಿ ನಾವು ಕಳೆದ ಚಿತ್ರಣ... ಇಷ್ಟವಾದರೆ ನೀವೂ ಇದನ್ನ ನೋಡಿ ನಮ್ಮಂತೆಯೇ ನಿಮ್ಮ ದಿನನಿತ್ಯದ ಕೆಲಸದಿಂದ ಹೊರಹೋಗಿ. ಜೀವನ ಒಮ್ಮೆಯಷ್ಟೆ ಸಿಗುವುದು ಇದನ್ನೆಲ್ಲ ಕಂಡು ಆನಂದಿಸಲು....